ಬೆಂಗಳೂರು, ಡಿ.07 (DaijiworldNews/HR): "ರಾಜ್ಯದಲ್ಲಿ ಬಿಜೆಪಿ ಪಕ್ಷ ಶೀಘ್ರದಲ್ಲೇ ಉರುಳಲಿದ್ದು, ಬಳಿಕ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ”ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪಕ್ಷದ ಹಿರಿಯ ಮುಖಂಡರು ಮತ್ತು ಜಿಲ್ಲಾಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, "ಬಿಜೆಪಿ ಸರ್ಕಾರ ಜನರಿಂದ ಆಯ್ಕೆಯಾಗಿಲ್ಲ, ಜನರ ಆದೇಶವನ್ನು ಉಲ್ಲಂಘಿಸುವ ಮೂಲಕ ರಚನೆಯಾಗಿದೆ. ನಮಗೆ ಬಹುಮತ ಇರಲಿಲ್ಲ, ಆದರೆ ಬಿಜೆಪಿಯೂ ಭ್ರಷ್ಟಾಚಾರ ಮತ್ತು ಹಣದಿಂದ ಮೋಸಗೊಳಿಸುವ ಮೂಲಕ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಹಸ್ಯ ರೀತಿಯಲ್ಲಿ ರೂಪುಗೊಂಡ ಸರ್ಕಾರವು ಜನರಿಗೆ ಶಾಪವಾಗಿ ಪರಿಣಮಿಸಿದೆ"ಎಂದರು.
“ಬಿಜೆಪಿ ಸರ್ಕಾರ ಜನರ ಹಿತಾಸಕ್ತಿಗಳನ್ನು ಪೂರೈಸುತ್ತಿಲ್ಲ. ಸರ್ಕಾರ ಕಾರ್ಯನಿರ್ವಹಿಸುತ್ತಿರುವ ವಿಧಾನದ ಬಗ್ಗೆ ಕೇಂದ್ರ ನಾಯಕತ್ವ ಅಸಮಾಧಾನ ವ್ಯಕ್ತಪಡಿಸಿದೆ. ಆದ್ದರಿಂದ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ರಾಜ್ಯ ಸರ್ಕಾರ ಕುಸಿಯಲು ಕಾರಣವಾಗುತ್ತವೆ. ಕಾಂಗ್ರೆಸ್ ಸ್ವಂತವಾಗಿ ಅಧಿಕಾರಕ್ಕೆ ಬರಬೇಕಾದರೆ ಎಲ್ಲರೂ ಶ್ರಮಿಸಬೇಕು ಮತ್ತು ತ್ಯಾಗಕ್ಕೆ ಸಿದ್ಧರಾಗಿರಬೇಕು. ಪಕ್ಷದ ಯೋಗಕ್ಷೇಮವನ್ನು ಸಾಧಿಸಲು ನಾವು ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡಬೇಕು. ಇದಕ್ಕೆ ಕಾಂಗ್ರೆಸ್ಸಿಗರು ಸಿದ್ಧರಾದರೆ ಆರು ತಿಂಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ನೋಡಲು ಸಾಧ್ಯವಿದೆ ”ಎಂದು ಹೇಳಿದ್ದಾರೆ.
ಇನ್ನು "ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕಾದರೆ ಕಾಂಗ್ರೆಸ್ ನಾಯಕರು ಮತ್ತು ಶಾಸಕರು ಜವಾಬ್ದಾರಿಯನ್ನು ಹೊತ್ತುಕೊಂಡು, ಮೇಲಿನಿಂದ ಕೆಳಕ್ಕೆ ಎಲ್ಲ ನಾಯಕರು ಸಮಾನವಾಗಿ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು" ಎಂದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಂದ್ ಕರೆಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಡಿಸೆಂಬರ್ 8 ರಂದು ಪ್ರತಿಭಟನೆ ನಡೆಸಲು ಪಕ್ಷದ ಎಲ್ಲ ಬೆಂಬಲಿಗರು ಮತ್ತು ಕಾರ್ಯಕರ್ತರು ಬೀದಿಗಿಳಿಯುವಂತೆ ಕರೆ ನೀಡಿದ್ದಾರೆ.