ಅಮರಾವತಿ, ಡಿ.07 (DaijiworldNews/MB) : ಆಂಧ್ರಪ್ರದೇಶದ ಏಳೂರಿನಲ್ಲಿ ನಿಗೂಢವಾದ ಕಾಯಿಲೆಯೊಂದು ಹರಡಿದ್ದು ಈ ಕಾಯಿಲೆಗೆ ಓರ್ವ ಬಲಿಯಾದರೆ, 292 ಮಂದಿ ಅಸ್ವಸ್ಥರಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ಗೋದಾವರಿ ಜಿಲ್ಲೆಯ ಆರೋಗ್ಯ ಮತ್ತು ವೈದ್ಯಕೀಯ ಅಧಿಕಾರಿಗಳು, ''292 ಮಂದಿ ಅಸ್ವಸ್ಥರಾಗಿದ್ದಾರೆ. ಪ್ರಸ್ತುತ 140ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ ತೆರಳಿದ್ದಾರೆ. ಉಳಿದವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ. ಈ ನಿಗೂಢ ಕಾಯಿಲೆ ಕಂಡು ಬಂದ ಜನರಲ್ಲಿ ಒಮ್ಮಿಂದೊಮ್ಮ ವಾಕರಿಕೆ ಮತ್ತು ಫಿಟ್ಸ್ ಲಕ್ಷಣಗಳು ಗೋಚರಿಸಿದೆ'' ಎಂದು ತಿಳಿಸಿದ್ದಾರೆ.
''ಇನ್ನು ಹಲವಾರು ಮಂದಿ ಪ್ರಜ್ಞೆ ಕಳೆದುಕೊಂಡಿದ್ದರು. ಇದಕ್ಕೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಹಾಗೆಯೇ ಇದು ಯಾವ ಬಗೆಯ ಕಾಯಿಲೆ ಎಂದು ಕೂಡಾ ತಿಳಿದು ಬಂದಿಲ್ಲ'' ಎಂದು ಹೇಳಿದ್ದಾರೆ.
ಮೊದಲು 45 ವರ್ಷದ ಪ್ರಾಯದ ವ್ಯಕ್ತಿಯೊಬ್ಬರಿಗೆ ವಾಕರಿಕೆ ಮತ್ತು ಅತಿಸಾರದ ಲಕ್ಷಣ ಕಾಣಿಸಿಕೊಂಡ ಕಾರಣ ಅವರನ್ನು ವಿಜಯವಾಡದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ಸಾವನ್ನಪ್ಪಿದ್ದಾರೆ. ಇನ್ನು ಈ ರೋಗ ಲಕ್ಷಣ ಕಾಣಿಸಿಕೊಂಡ ಹಲವು ಮಂದಿ ಕೆಲವೇ ನಿಮಿಷಗಳಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಕೆಲವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ವಿಶೇಷ ವೈದ್ಯರ ತಂಡವು ಏಳೂರಿಗೆ ಬಂದು ಚಿಕಿತ್ಸೆ ನೀಡುತ್ತಿದೆ ಎಂದು ಹೇಳಲಾಗಿದೆ.
ಇನ್ನು ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಸೋಮವಾರ ಏಳೂರಿಗೆ ಭೇಟಿ ನೀಡಲಿದ್ದಾರೆ. ಆಸ್ಪತ್ರೆಯಲ್ಲಿರುವ ರೋಗಿಗಳ ಯೋಗಕ್ಷೇಮ ವಿಚಾರಿಸಿ ಬಳಿಕ ಪಶ್ಚಿಮ ಗೋಧಾವರಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.