ಶಿವಮೊಗ್ಗ, ಡಿ. 06 (DaijiworldNews/SM): ಅನಾರೋಗ್ಯದ ತಾಯಿಯೊಂದಿಗೆ ಆಸ್ಪತ್ರೆಗೆ ಬಂದ ಅಪ್ರಾಪ್ತ ಬಾಲಕಿಯ ಮೇಲೆ ಆಸ್ಪತ್ರೆಯಲ್ಲಿದ್ದ ವಾರ್ಡ್ ಹುಡುಗ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಕ್ಗ್ಯಾನ್ ಆಸ್ಪತ್ರೆಯ ವಾರ್ಡ್ ಹುಡುಗ ಮನೋಜ್ ಮತ್ತು ಆತನ ಮೂವರು ಸ್ನೇಹಿತರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬಾಲಕಿಯ ತಾಯಿಯನ್ನು ಇತ್ತೀಚೆಗೆ ಮೆಕ್ಗ್ಯಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹುಡುಗಿ ತಾಯಿಯ ಆರೈಕೆಗೆಂದು ಹಾಗೂ ಆಕೆಯನ್ನು ನೋಡಿಕೊಳ್ಳಲು ತಾಯಿಯೊಂದಿಗೆ ಆಸ್ಪತ್ರೆಯಲ್ಲಿದ್ದಳು. ವಾರ್ಡ್ ಹುಡುಗನಾಗಿದ್ದ ಮನೋಜ್ ತಾಯಿ ಮತ್ತು ಮಗಳಿಗೆ ಆಹಾರವನ್ನು ತರುವ ಮೂಲಕ ಸಹಾಯ ಮಾಡುತ್ತಿದ್ದ. ಹಾಗೂ ಆಕೆಯೊಂದಿಗೆ ಸಲುಗೆ ಬೆಳೆಸಿಕೊಳ್ಳಲು ಯತ್ನಿಸಿದ್ದ. ಮತ್ತು ಹುಡುಗಿಯ ಜೊತೆ ಪರಿಚಿತರಾದರು.
ಕೆಲವು ದಿನಗಳ ಹಿಂದೆ ಅಶಾಂತಿಯ ನಂತರ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಹೋಟೆಲ್, ರೆಸ್ಟೋರೆಂಟ್ಗಳು ಮುಚ್ಚಿದ್ದರಿಂದ ಹುಡುಗಿಗೆ ಆಹಾರ ಸಿಕ್ಕಿರಲಿಲ್ಲ. ಆಹಾರವನ್ನು ನೀಡುವ ಸ್ಥಳಕ್ಕೆ ಅವಳನ್ನು ಕರೆದೊಯ್ಯುವ ನೆಪದಲ್ಲಿ ಮನೋಜ್ ಹುಡುಗಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದಾನೆ. ಅವನ ಮೂವರು ಸ್ನೇಹಿತರು ಕೂಡ ಆತನೊಂದಿಗೆ ಕಾರಿನಲ್ಲಿದ್ದರು. ಬಳಿಕ ಅವಳನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನು ಈ ಬಗ್ಗೆ ಬಾಲಕಿ ತಾಯಿಗೆ ಮಾಹಿತಿ ನೀಡಿದ್ದಾಳೆ. ಅದರಂತೆ ಪ್ರಕರಣ ಕೂಡ ದಾಖಲಾಗಿದೆ. ಇನ್ನು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲು ಶೋಧ ನಡೆಯುತ್ತಿದೆ.