ಬೆಂಗಳೂರು, ಡಿ. 06 (DaijiworldNews/SM): ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟು ಸದ್ಯಕ್ಕಂತು ಪರಿಹಾರಗೊಳ್ಳುವಂತೆ ಗೋಚರಿಸುತ್ತಿಲ್ಲ. ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುತ್ತೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ, ವರಿಷ್ಟರಿಂದ ಮಾತ್ರ ಗ್ರೀನ್ ಸಿಗ್ನಲ್ ಇನ್ನು ಸಿಕ್ಕಿಲ್ಲ ಎನ್ನಲಾಗಿದ್ದು, ಸಂಪುಟ ವಿಸ್ತರಣೆ ಬಿಕ್ಕಟ್ಟು ಮುಂದುವರೆಯುವ ಅಧ್ಯಾಯದಂತೆ ಕಾಣುತ್ತಿದೆ.
ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಸಂಪುಟ ವಿಸ್ತರಣೆಗೆ ಇನ್ನೂ ವರಿಷ್ಟರ ಅನುಮೋದನೆ ಸಿಕ್ಕಿಲ್ಲ ಎಂದಿದ್ದಾರೆ. ಇದರಿಂದಾಗಿ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿರುವ ಅವರು, ಬಿಜೆಪಿ ರಾಜ್ಯ ಉಸ್ತವಾರಿ ಅರುಣ್ ಸಿಂಗ್ ಅವರು ಪಕ್ಷದ ರಾಜ್ಯ ಘಟಕದ ಕಚೇರಿಯಲ್ಲಿ ಸಚಿವರು, ಶಾಸಕರು ಮತ್ತು ಪ್ರಮುಖ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರವಾಗಿದೆ. ಆದರೆ ರಾಷ್ಟ್ರೀಯ ಪಕ್ಷವಾಗಿರುವ ಕಾರಣದಿಂದಾಗಿ ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯ ದೆಹಲಿಯಿಂದ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗಬೇಕಾದ ಅವಶ್ಯಕತೆ ಇದೆ. ಆದರೆ, ಹೈಕಮಾಂಡ್ ಇದಕ್ಕೆ ಯಾವುದೇ ಒಅಲವು ತೋರಿಸದೇ ಇರುವುದು ಹಲವು ಗುಮಾನಿಗಳಿಗೆ ಎಡೆಮಾಡಿಕೊಟ್ಟಿದೆ. ಮತ್ತೊಂದೆಡೆ ಆಕಾಂಕ್ಷಿಗಳು ಮಾತ್ರ ಒಂದೋ ನಾಳೆಯೋ ಸಚಿವರಾಗಲಿದ್ದೇವೆ ಎಂಬ ಆಸೆಯಲ್ಲೇ ದಿನ ಕಳೆಯುವ ಸ್ಥಿತ್ಯಲ್ಲಿದ್ದು, ಶೀಘ್ರದಲ್ಲೇ ಇದಕ್ಕೊಂದು ತಾರ್ಕಿಕ ಅಂತ್ಯ ಕಂಡುಕೊಂಡು ಅಭಿವೃದ್ಧಿ ಕಾರ್ಯಗಳತ್ತ ಗಮನ ನೀಡಬೇಕಾದ ಅನಿವಾರ್ಯತೆ ಇದೆ.