ಹುಬ್ಬಳ್ಳಿ, ಡಿ.06 (DaijiworldNews/PY): "ಜೆಡಿಎಸ್ ಅಧಿಕಾರದ ಆಸೆಯಿಂದ ಕಾಂಗ್ರೆಸ್ನೊಂದಿಗೆ ಸೇರಿತು. ಆದರೆ, ಕಾಂಗ್ರೆಸ್ ಏನು ಎಂಬ ವಿಚಾರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಹಳ ತಡವಾಗಿ ಜ್ಞಾನೋದಯವಾಗಿದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ಎಂದಿಗೂ ಕೂಡಾ ಮಿತ್ರಪಕ್ಷಗಳಿಗೆ ಒಳಿತನ್ನು ಬಯಸಿಲ್ಲ. ಈ ವಿಚಾರ ತಿಳಿದಿದ್ದರೂ ಕೂಡಾ ಹೆಚ್ಡಿಕೆ ಅವರು ಕಾಂಗ್ರೆಸ್ನ ಬೆಂಬಲ ಪಡದು ಸಿಎಂ ಆಗಿದ್ದರು. ಆದರೆ, ಇದೀಗ ಅವರಿಗೆ ಕಾಂಗ್ರೆಸ್ ಏನು ಎನ್ನುವ ವಿಚಾರ ಅರಿವಿಗೆ ಬಂದಿದೆ" ಎಂದರು.
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೃಷಿ ಕಾಯ್ದೆಯ ಬಗ್ಗೆ ರೈತರೊಂದಿಗೆ ಚರ್ಚಿಸಲು ಕೇಂದ್ರ ಸರ್ಕಾರವು ಮುಕ್ತ ಮನಸ್ಸು ಹೊಂದಿದ್ದು, ಈ ಬಗ್ಗೆ ಉಂಟಾಗಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವಂತ ಪ್ರಯತ್ನ ಮಾಡುತ್ತದೆ" ಎಂದು ತಿಳಿಸಿದರು.