ತಿರುವನಂತಪುರ,ಡಿ. 06 (DaijiworldNews/HR): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರವಾದಿ ಎಂ.ಎಸ್.ಗೋಳ್ವಾಲ್ಕರ್ ಅವರ ಹೆಸರನ್ನು ತಿರುನಂತಪುರದಲ್ಲಿರುವ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ ಸಂಸ್ಥೆ(ಆರ್ಜಿಸಿಬಿ)ಗೆ ಮರು ನಾಮಕರಣ ಮಾಡದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಹರ್ಷವರ್ಧನ್ ಅವರಿಗೆ ಪತ್ರ ಬರೆದಿದ್ದಾರೆ.
ಹರ್ಷವರ್ಧನ್ ಅವರು ಆರ್ಜಿಸಿಬಿಯ ಸಂಸ್ಥೆಗೆ "ಶ್ರೀಗುರುಜಿ ಮಾಧವ್ ಸದಾಶಿವ್ ಗೋಳ್ವಾಲ್ಕರ್ ನ್ಯಾಶನಲ್ ಸೆಂಟರ್ ಫಾರ್ ಕಾಂಪ್ಲೆಕ್ಸ್ ಡಿಸೀಸ್ ಇನ್ ಕ್ಯಾನ್ಸರ್ ಆಯಂಡ್ ವೈರಲ್ ಇನ್ಫೆಕ್ಷನ್'' ಎಂದು ಮರು ನಾಮಕರಣ ಮಾಡಲಾಗುವುದಾಗಿ ತಿಳಿಸಿದ್ದರು.
ಈ ಕುರಿತು ಪತ್ರ ಬರೆದಿರುವ ಪಿಣರಾಯಿ ವಿಜಯನ್, "ಆರ್ಜಿಸಿಬಿಯನ್ನು ಆರಂಭದಲ್ಲಿ ರಾಜ್ಯ ಸರಕಾರ ನಡೆಸುತ್ತಿದ್ದು, ಇದನ್ನು ಸಂಶೋಧನೆ ಹಾಗೂ ಅಭಿವೃದ್ದಿಯಲ್ಲಿ ಅಂತರ್ರಾಷ್ಟ್ರೀಯ ಗುಣಮಟ್ಟವನ್ನು ಸಾಧಿಸುವ ಕೇಂದ್ರವಾಗಿ ಅಭಿವೃದ್ದಿಪಡಿಸುವ ಉದ್ದೇಶದಿಂದ ಭಾರತ ಸರಕಾರಕ್ಕೆ ಹಸ್ತಾಂತರಿಸಲಾಯಿತು. ಹಾಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ಕ್ಯಾಂಪಸ್ಗೆ ಅಂತರ್ರಾಷ್ಟ್ರೀಯ ಖ್ಯಾತಿಯ ಕೆಲವು ಪ್ರಸಿದ್ಧ ಭಾರತೀಯ ವಿಜ್ಞಾನಿಗಳ ಹೆಸರನ್ನು ಇಡಬೇಕು" ಎಂದು ಪತ್ರದಲ್ಲಿ ತಿಳಿಸಿದ್ದಾರೆ.