ಬೆಂಗಳೂರು, ಡಿ.06 (DaijiworldNews/PY): "ಕಾಂಗ್ರೆಸ್ನ ಬೆಂಬಲ ಪಡೆದು ಕುಮಾರಸ್ವಾಮಿ ಅವರು 14 ತಿಂಗಳು ಮುಖ್ಯಮಂತ್ರಿ ಆಗಿರಲಿಲ್ಲವೇ?. ಆ ಸಂದರ್ಭ ಅವರು ಮಾತನಾಡಬೇಕಿತ್ತು. ಈಗ ಕಾಂಗ್ರೆಸ್ ಮೇಲೆ ಬೊಟ್ಟು ಮಾಡಿ ತೋರಿಸುವುದು ಹೆಚ್ಡಿಕೆಗೆ ಶೋಭೆಯಲ್ಲ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ನ ವಿರುದ್ದ ನೀಡಿದ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಕುಮಾರಸ್ವಾಮಿ ಅವರು ಕಾಂಗ್ರೆಸ್ ಬೆಂಬಲ ಪಡೆದು 14 ತಿಂಗಳು ಸಿಎಂ ಆಗಿದ್ದರು. ಆ ಸಮಯದಲ್ಲಿ ಅವರು ಹೇಳಬೇಕಿತ್ತು. ಇದೀಗ ಹೀಗೆ ಹೇಳುವುದು ಸೂಕ್ತವಲ್ಲ" ಎಂದಿದ್ದಾರೆ.
ಹಿರಿಯ ಶಾಸಕರ ಸಭೆಯ ಬಗ್ಗೆ ಮಾತನಾಡಿದ ಅವರು, "ವಿಧಾನಮಂಡಲ ಅಧಿವೇಶನ ನಾಳೆ ಆರಂಭವಾಗಿದೆ. ಈ ವೇಳೆ ಪಕ್ಷದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಿದ್ದೇವೆ" ಎಂದು ತಿಳಿಸಿದ್ದಾರೆ.
"ರಾಜ್ಯ ಸರ್ಕಾರವು ಕೊರೊನಾದ ಸಂಕಷ್ಟದ ಸಂದರ್ಭ ಜನರಿಗೆ ನೆರವಾಗಲಿಲ್ಲ. ಅಲ್ಲದೇ, ಆರ್ಥಿಕ ಸಂಕಷ್ಟಕ್ಕೊಳಗಾದ ಹಲವು ವರ್ಗಗಳಿಗೆ ಇನ್ನೂ ಕೂಡಾ ಪರಿಹಾರ ಸಿಕ್ಕಿಲ್ಲ. ಈ ನಡುವೆ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ತಲೆಕೆಡಿಸಿಕೊಂಡಿರುವ ಬಿಜೆಪಿ ಸರ್ಕಾರ ತನ್ನ ಆಡಳಿತದ ಬಗ್ಗೆ ಮರೆತಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಆಗಬೇಕಿದ್ದ ಅಭಿವೃದ್ಧಿ ಕೆಲಸಗಳು ಬಾಕಿಯಾಗಿವೆ" ಎಂದಿದ್ದಾರೆ.