ಅಯೋಧ್ಯೆ, ಡಿ.06 (DaijiworldNews/MB) : ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಮಸೀದಿಯ ಮೂಲ ನೀಲನಕ್ಷೆ ಸಿದ್ಧವಾಗಿದ್ದು ಈ ಮಸೀದಿ ನಿರ್ಮಾಣ ಪೂರ್ಣಗೊಂಡ ಬಳಿಕ ಸುಮಾರು 2,000 ಜನರು ಈ ಮಸೀದಿಯಲ್ಲಿ 'ನಮಾಜ್' ಮಾಡಬಹುದಾಗಿದೆ ಎಂದು ವರದಿ ತಿಳಿಸಿದೆ.
ಮಸೀದಿ ನೆಲಸಮ ಮಾಡಿದ ಬಳಿಕ ಸುನ್ನಿ ವಕ್ಫ್ ಮಂಡಳಿಗೆ ನೀಡಲಾದ ಭೂಮಿಯಲ್ಲಿ ನಿರ್ಮಾಣವಾಗಲಿರುವ ಈ ಮಸೀದಿಗೆ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ಹೊಸ ಮಸೀದಿಗೆ ನೀಲನಕ್ಷೆಯನ್ನು ಸಿದ್ಧಪಡಿಸಿದೆ.
ಈ ಭೂಮಿಯಲ್ಲಿ ಮಸೀದಿ, ಆಸ್ಪತ್ರೆ, ಇಂಡೋ-ಇಸ್ಲಾಮಿಕ್ ಸಂಶೋಧನಾ ಕೇಂದ್ರ ಮತ್ತು ಸಮುದಾಯ ಭೋಜನಾ ಗೃಹದ ವಿನ್ಯಾಸದ ಜವಾಬ್ದಾರಿಯನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಪ್ರಾಧ್ಯಾಪಕ ವಾಸ್ತುಶಿಲ್ಪ ವಿಭಾಗದ ಅಧ್ಯಕ್ಷರಾಗಿರುವ ಎಸ್.ಎಂ. ಅಖ್ತರ್ ಅವರಿಗೆ ಟ್ರಸ್ಟ್ ನೀಡಿದೆ.
ಸುಮಾರು 15 ಸಾವಿರ ಚದರ ಮೀಟರ್ ಭೂಮಿಯಲ್ಲಿ ನಿರ್ಮಿಸಲಿರುವ ಮಸೀದಿಗೆ ಆಧುನಿಕ ನೋಟವನ್ನು ನೀಡಲಾಗಿದೆ. ಕಟ್ಟಡದ ಆಕಾರವು ಅಂಡಾಕಾರದಲ್ಲಿದ್ದು ಛಾವಣಿಯು ಗುಮ್ಮಟವಾಗಿರಲಿದೆ. ಹಾಗೆಯೇ ಪಾರದರ್ಶಕವಾಗಿರಲಿದೆ. ಅಷ್ಟೇ ಅಲ್ಲದೇ ಮಸೀದಿಗೆ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ ಎಂದು ವರದಿ ತಿಳಿಸಿದೆ.