ಚಿಕ್ಕಬಳ್ಳಾಪುರ, ಡಿ.06 (DaijiworldNews/PY): "ಎಷ್ಟು ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ವಿವಾಹವಾಗುವುದು? ಎಷ್ಟು ಬಾರಿ ಡೈವೋರ್ಸ್ ಆಗುವುದು?" ಎಂದು ಕೇಳುವ ಮುಖೇನ ಆರೋಗ್ಯ ಸಚಿವ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾದ ಸಂದರ್ಭ ಇದೊಂದು ಅನೈತಿಕ ಸಂಬಂಧ ಎಂದು ಮೊದಲೇ ನಾನು ಹೇಳಿದ್ದೆ. ಇದೀಗ ಅವರೇ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಇದು ಸಂತೋಷ ಹಾಗೂ ಸ್ವಾಗತಾರ್ಹವಾದ ವಿಚಾರವಾಗಿದೆ" ಎಂದು ಹೇಳಿದರು.
"ಮುಂದೆಯಾದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತೆ ಒಂದಾಗಲಿ. ಹಾಗಾದಲ್ಲಿ ಮಾತ್ರ ಗೌರವ ಉಳಿಯುತ್ತದೆ. ಈಗ ವಿವಾಹವಾಗಿದೆ. ಬಿಎಸ್.ಯಡಿಯೂರಪ್ಪ ಅವರು ಸಿಎಂ ಆಗಿಯೂ ಆಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಒಂದೇ ವರ್ಷ ಸಿಎಂ ಆಗಬೇಕು ಅಂತ ಬರೆದಿತ್ತು. ಇದೆಲ್ಲಾ ವಿಧಿಯಾಟ ಈಗ ಏನೂ ಮಾಡಲೂ ಸಾಧ್ಯವಿಲ್ಲ" ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದರು.
ತೆಲಂಗಾಣದ ಹೈದರಾಬಾದ್ ಮಹನಾಗರ ಪಾಲಿಕೆ ಚುನಾವಣಾ ಫಲಿತಾಂಶದ ಪ್ರತಿಕ್ರಿಯಿಸಿದ ಅವರು, "ಫಲಿತಾಂಶ ನಮ್ಮ ನಿರೀಕ್ಷೆಯಂತೆ ಮತಗಳು ಬಂದಿರುವ ಕಾರಣ ಸಂತಸ ತಂದಿದೆ. ಶೇ.10 ರಷ್ಟು ಇದ್ದ ಮತಗಳು ಈಗ ಶೇ.36 ರಷ್ಟು ಬಂದಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.