ಬೆಂಗಳೂರು, ಡಿ.06 (DaijiworldNews/MB) : ಸಂಪುಟ ವಿಸ್ತರಣೆ ಮಾಡಲು ಬಿಜೆಪಿ ವರಿಷ್ಠರು ಇನ್ನೂ ಅನುಮತಿ ನೀಡಿಲ್ಲ. ಹಾಗಿರುವಾಗ ಒಂದೆರಡು ದಿನದಲ್ಲಿ ಸಂಪುಟ ವಿಸ್ತರಣೆಯಾಗುವ ಸಾಧ್ಯೆತೆಯೇ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ಉಸ್ತುವಾರಿ ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪಕ್ಷದ ವರಿಷ್ಠರು ಸಂಪುಟ ವಿಸ್ತರಣೆ, ನಿಗಮ– ಮಂಡಳಿಗಳ ನೇಮಕಾತಿ ವಿಚಾರದಲ್ಲಿ ಸಚಿವರು, ಶಾಸಕರು, ಪಕ್ಷದ ಪ್ರಮುಖರ ಅಭಿಪ್ರಾಯ ಪಡೆಯಲು ತೀರ್ಮಾನಿಸಿದ್ದು ಎಲ್ಲರ ಅಭಿಪ್ರಾಯವನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಪಡೆದ ಬಳಿಕ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಿದ್ದಾರೆ. ಆ ನಂತರ ಮುಖ್ಯಮಂತ್ರಿ ರಾಷ್ಟ್ರೀಯ ನಾಯಕರಲ್ಲಿ ಚರ್ಚಿಸಲಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ವಿಳಂಬವಾಗಲಿದೆ'' ಎಂದು ಮಾಹಿತಿ ನೀಡಿದರು.
ಇನ್ನು ಇದೇ ವೇಳೆ ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ''ಕಾಂಗ್ರೆಸ್ ವಿಷ ಕಕ್ಕುವ ಪಕ್ಷವಾಗಿದ್ದು ಅದನ್ನು ನಂಬಿದರೆ ಗೋವಿಂದ. ನಮಗೀಗ ಕುಮಾರಸ್ವಾಮಿಯ ಸಹಾಯದ ಅಗತ್ಯವಿಲ್ಲ. ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ಬಿಜೆಪಿಗೆ ಯಾರೊಂದಿಗೆ ಒಳ ಒಪ್ಪಂದವೂ ಬೇಡ ಹೊರ ಒಪ್ಪಂದವೂ ಬೇಡ'' ಎಂದರು.