ಹುಬ್ಬಳ್ಳಿ, ಡಿ.06 (DaijiworldNews/PY): "ಕಾಂಗ್ರೆಸ್ ಸಹವಾಸ ಮಾಡಿ ನಾನು ಕೆಟ್ಟೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಸರಿಯಾಗಿಯೇ ಹೇಳಿದ್ದಾರೆ. ಕಾಂಗ್ರೆಸ್, ಗಾಂಧಿ ಕುಟುಂಬದ ಬದಲಾಗಿ ಬೇರೆ ಯಾರನ್ನೂ ಕೂಡಾ ಬೆಳೆಸಿಲ್ಲ" ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೆಚ್ಡಿಕೆ ಅವರು ಬಿಜೆಪಿಯೊಂದಿಗೆ ಇದ್ದಿದ್ದರೆ ಇದೀಗ ಅಧಿಕಾರದಲ್ಲಿರುತ್ತಿದ್ದರು. ಈಗ ಅವರು ಪಶ್ಚಾತಾಪ ಪಟ್ಟುಕೊಳ್ಳುತ್ತಿದ್ದಾರೆ" ಎಂದು ತಿಳಿಸಿದರು.
"ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ಮಾಡಿಯೇ ಬೇರೆ ಪಕ್ಷಗಳು ಹುಟ್ಟಿಕೊಂಡಿವೆ. ಮೊದಲು ಅವರೊಂದಿಗೆ ಚೆನ್ನಾಗಿಯೇ ಇರುತ್ತಾರೆ. ಬಳಿಕ ಅವರಿಂದ ಮೋಸಕ್ಕೊಳಗಾಗಿ ಪಕ್ಷ ಬಿಟ್ಟು ಬರುತ್ತಾರೆ. ಬಿಜೆಪಿ ಹಾಗೂ ಜೆಡಿಎಸ್ನದ್ದು ಪ್ರಕೃತಿ ಸಹಜವಾದ ಸಂಬಂಧ. ಜೆಡಿಎಸ್ ನಮಗೆ ಬೆಂಬಲ ನೀಡಿದರೆ ಅವರಿಗೆ ಯಾವತ್ತಿಗೂ ಕೂಡಾ ಸ್ವಾಗತವಿದೆ. ಸಭಾಪತಿಯನ್ನು ಕೆಳಗಿಳಿಸುವ ಸಲುವಾಗಿ ಜೆಡಿಎಸ್ ನಮ್ಮೊಂದಿಗೆ ಕೈಜೋಡಿಸಿದರೆ ಉತ್ತಮ. ಈ ಬಗ್ಗೆ ನಾವು ನಿರೀಕ್ಷೆ ಮಾಡುತ್ತಿದ್ದೇವೆ" ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಈ ಬಗ್ಗೆ ವರಿಷ್ಠರು ತೀರ್ಮಾನ ಮಾಡಬೇಕು. ವರಿಷ್ಠರು ಯಾವಾಗ ಹೇಳುತ್ತಾರೋ ಆಗ ಸಚಿವ ಸಂಪುಟ ವಿಸ್ತರಣೆಯಾಗಲಿದೆ" ಎಂದರು.
ಲೋಕಸಭಾ ಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ ಎನ್ನುವುದು ವದಂತಿ. ಇಲ್ಲಿಯವರೆಗೆ ಅಲ್ಲಿ ಸ್ಪರ್ಧಿಸುವ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆದಿಲ್ಲ" ಎಂದು ತಿಳಿಸಿದರು.