ವಿಜಯಪುರ,ಡಿ. 06 (DaijiworldNews/HR): ಡಿ.23 ರಂದು ಪಂಚಮಸಾಲಿ ಸಮಾಜಕ್ಕೆ ಕರ್ನಾಟಕದಲ್ಲಿ 2A ಹಾಗೂ ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಒತ್ತಾಯಿಸಿ ಕೂಡಲಸಂಗಮದಿಂದ ಪಾದಯಾತ್ರೆ ಮತ್ತು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕರ್ನಾಟಕದಲ್ಲಿ 80 ಲಕ್ಷ ಜನಸಂಖ್ಯೆ ಇರುವ ಮೀಸಲಾತಿ ಪಡೆಯಲೆಂದೇ ಸಮಾಜ ಸಂಘಟನೆ ಮಾಡಲಾಗುತ್ತದೆ. ಬೆಳಗಾವಿ ಸುವರ್ಣ ಸೌಧ ಎದುರು ಉಪವಾಸ ಸತ್ಯಾಗ್ರಹದ ಹೋರಾಟ ನಡೆಸಲಾಗಿತ್ತು ಆಗ ಮುಖ್ಯಮಂತ್ರಿಯವರ ಕರೆಯ ಮೇರೆಗೆ ಹೋರಾಟ ಹಿಂಪಡೆದು, ಸರ್ಕಾರಕ್ಕೆ ನೀಡಿದ ನವೆಂಬರ್ 28 ಗಡುವು ಮೀರಿದೆ ಹಾಗಾಗಿ ಡಿ.23 ರಿಂದ ಕೂಡಲಸಂಗಮದಿಂದ ಬೆಂಗಳೂರು ವಿಧಾನಸೌಧದವರೆಗೆ ಪಂಚ ಲಕ್ಷ ಹೆಜ್ಜೆ ಪಾದಯಾತ್ರೆ ಹಮ್ಮಿಕೊಳ್ಳಲಾಗುದು" ಎಂದರು.
ಇನ್ನು "ಬಸವಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಬಸವೇಶ್ವರ ಹೆಸರು ನಾಮಕರಣ ಮಾಡಲು ಕೋರಲಾಗಿದೆ. ಹಾಗಾಗಿ ಯಡಿಯೂರಪ್ಪ ಸರ್ಕಾರ ನಮ್ಮ ಸಮಾಜದ ಹಕ್ಕೊತ್ತಾಯಕ್ಕೆ ಸ್ಪಂದಿಸುವ ವಿಶ್ವಾಸ ಇದೆ" ಎಂದು ಹೇಳಿದ್ದಾರೆ.
ಡಿ.23 ರಂದು ನಡೆಯುವ ಪಾದಯಾತ್ರೆಯಲ್ಲಿ ವಿವಿಧ ಮಠಗಳ ಮಠಾಧೀಶರು ಸಮುದಾಯದ ಎಲ್ಲ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.