ಬೆಂಗಳೂರು, ಡಿ.06 (DaijiworldNews/PY): "ಬಿಜೆಪಿ ನಾಯಕರು ಆರ್ಎಸ್ಎಸ್ನ ಮುಖವಾಣಿಯಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ನಾರಾಯಣ ಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್ ಕೇಶವ ಕೃಪಾಗೆ ಭೇಟಿ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿ ನಾಯಕರು ಸರ್ಕಾರದಲ್ಲಿ ಗೊಂಬೆಗಳ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರ ಕೀ ಇರುವುದು ಕೇಶವ ಕೃಪಾದಲ್ಲಿ" ಎಂದಿದ್ದಾರೆ.
"ವಿಧಾನ ಮಂಡಲದ ಅಧಿವೇಶನ ನಾಳೆ ಆರಂಭವಾಗಲಿದ್ದು, ಅಧಿವೇಶನದಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಬೇಕು ಎನ್ನುವ ಬಗ್ಗೆ ಇಂದು ಸಭೆ ಸೇರಿ ಚರ್ಚೆ ನಡೆಸುತ್ತೇವೆ. ಅಲ್ಲದೇ, ಇಂದು ನಡೆಯುವ ಸಭೆಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ" ಎಂದು ತಿಳಿಸಿದ್ದಾರೆ.
"ಬಿಜೆಪಿಯು ಜನಸಾಮಾನ್ಯರ ವಿರೋಧಿ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದು, ಈ ರೀತಿಯಾದ ಕಾನೂನಿಗೆ ನಮ್ಮ ವಿರೋಧವಿದೆ" ಎಂದು ಹೇಳಿದ್ದಾರೆ.