ಮೈಸೂರು, ಡಿ.06 (DaijiworldNews/PY): "ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಸಹವಾಸ ಮಾಡಿ ಕೆಟ್ಟೆ ಎನ್ನುವ ಬಗ್ಗೆ ಬಹಳ ತಡವಾಗಿ ಅರಿವಾಗಿದೆ" ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಸರ್ಕಾರ ಮಾಡಿದ್ದ ಸಂದರ್ಭ ಮನೆ ಮಾತಾಗಿದ್ದರು. ಅವರಿಗೆ 20 ತಿಂಗಳ ಆಡಳಿತದ ಸಂದರ್ಭ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಇನ್ನು ಗ್ರಾಮ ವಾಸ್ತವ್ಯ, ಜನರೊಂದಿಗೆ ಬೆರೆಯುವ ಅವರ ನಡೆ ಹೆಚ್ಡಿಕೆ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿತ್ತು. ಎಲ್ಲರನ್ನೂ ಕೂಡಾ ಬ್ರದರ್ ಎನ್ನುವ ಅವರ ಮಾತು ಸಾಕಷ್ಟು ಖ್ಯಾತಿ ಪಡೆದಿತ್ತು" ಎಂದರು.
"ಚಿಕ್ಕ ವಯಸ್ಸಿನಲ್ಲೇ ಮುಖ್ಯಮಂತ್ರಿಯಾಗಿದ್ದ ಹೆಚ್ಡಿಕೆ ಅವರ ಬಗ್ಗೆ ನಾನೊಂದು ಲೇಖನ ಬರೆದಿದ್ದೆ. ಆದರೆ, ಈಗಿರುವ ಪರಿಸ್ಥಿತಿಯ ಬಗ್ಗೆ ನಾನು ಮಾತನಾಡಲಾರೆ. ಬಿಜೆಪಿ ಸರ್ಕಾರ ಇದ್ದ ಸಂದರ್ಭ ಉತ್ತಮವಾದ ಆಡಳಿತ ನಡೆಸಿದ್ದ ವಿಚಾರವಾಗಿ ಅವರ ಬಗ್ಗೆ ನನಗೆ ಗೌರವವಿದೆ" ಎಂದು ತಿಳಿಸಿದರು.