ಬೆಂಗಳೂರು, ಡಿ.06 (DaijiworldNews/MB) : ''ಕೇಂದ್ರಕ್ಕೆ ರೈತರ ಹಿತಕ್ಕಿಂತ ಕಾರ್ಪೊರೇಟ್ ಹಿತವೇ ಮುಖ್ಯವಾಗಿದೆಯೆ..?'' ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ಖಂಡಿಸಿ ದೆಹಲಿಯಲ್ಲಿ 11 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು ಶನಿವಾರ 10 ನೇ ದಿನ ಸರ್ಕಾರ ಹಾಗೂ ರೈತ ಮುಖಂಡರ ನಡುವೆ ಐದನೇ ಸುತ್ತಿನ ಮಾತುಕತೆ ನಡೆದಿದೆ. ಈ ಮಾತುಕತೆ ವಿಫಲವಾಗಿದೆ. ಹಾಗೆಯೇ ಈ ಮಾತುಕತೆ ಸಂದರ್ಭ ರೈತರು ಮೌನ ಪ್ರತಿಭಟನೆ ನಡೆಸಿದ್ದಾರೆ. ಇನ್ನು ರೈತರು ಡಿ.8 ಕ್ಕೆ ಬಂದ್ ನಡೆಸಲಿದ್ದು ಮುಂದಿನ ಸುತ್ತಿನ ಮಾತುಕತೆ 8 ರಂದು ನಡೆಯಲಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಗುಂಡೂರಾವ್, ''ಕೇಂದ್ರ ಸರ್ಕಾರ ಪ್ರತಿಭಟನಾನಿರತ ರೈತರೊಂದಿಗೆ ಚೌಕಾಸಿ ವ್ಯವಹಾರ ನಡೆಸುವ ಸಮಯ ಇದಲ್ಲ. ಕೃಷಿ ಕಾಯ್ದೆಯ ವಿಚಾರದಲ್ಲಿ ರೈತರ ನಿಲುವು ಸ್ಪಷ್ಟವಾಗಿದೆ. ರೈತರಿಗೆ ಹಠ ಬಿಡಿ ಎನ್ನುವ ಕೇಂದ್ರ, ಆ ರೈತ ವಿರೋಧಿ ಕಾಯ್ದೆಗಳನ್ನು ರದ್ದು ಮಾಡಲು ಯಾಕೆ ಮನಸ್ಸು ಮಾಡುತ್ತಿಲ್ಲ. ಕೇಂದ್ರಕ್ಕೆ ರೈತರ ಹಿತಕ್ಕಿಂತ ಕಾರ್ಪೊರೇಟ್ ಹಿತವೇ ಮುಖ್ಯವಾಗಿದೆಯೆ..?'' ಎಂದು ಪ್ರಶ್ನಿಸಿದ್ದಾರೆ.