ಬೆಂಗಳೂರು,ಡಿ. 06 (DaijiworldNews/HR): ಸಿನಿಮಾ ಕಟೌಟ್ ಬದಲಾಯಿಸಲು ಹೋಗಿ ಸೆಕ್ಯುರಿಟಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ ಘಟನೆ ಗಾಂಧಿನಗರದಲ್ಲಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ. ಆದರೆ, ಅವರ ಬಟ್ಟೆ ಮೇಲೆ ‘ರಾಜು ಸೆಕ್ಯುರಿಟಿ ಏಜೆನ್ಸಿ, ಸುಲ್ತಾನ್ಪಾಳ್ಯ’ ಎಂಬ ಬರಹವಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ತ್ರಿವೇಣಿ ಚಿತ್ರಮಂದಿರದ ಎದುರು ಹೊಸ ಸಿನಿಮಾ ಬರುತ್ತಿದ್ದರಿಂದ ಕಟೌಟ್ ಬದಲಾವಣೆ ಮಾಡಲಾಗುತ್ತಿದ್ದು, ಈ ವೇಳೆ ಸೆಕ್ಯುರಿಟಿ ಸಿಬ್ಬಂದಿ ಆಗಿದ್ದ ವ್ಯಕ್ತಿ, ಕಟೌಟ್ ಮೇಲೆ ಹತ್ತಿ ಪೋಸ್ಟರ್ ಬದಲಾವಣೆ ಮಾಡುತ್ತಿದ್ದರು. ಅದೇ ವೇಳೆಯೇ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆ ಸಂಧರ್ಭದಲ್ಲಿ ಚಿತ್ರಮಂದಿರಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ಯಾರು ಇಲ್ಲದ ಕಾರಣ ಸೆಕ್ಯುರಿಟಿ ಸಿಬ್ಬಂದಿ ಬಿದ್ದಿದ್ದು ನೋಡಿ ದಾರಿಹೋಕರು ರಕ್ಷಣೆಗೆ ತೆರಳಿದ್ದಾರೆ ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಸೆಕ್ಯುರಿಟಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ.