ಬೆಂಗಳೂರು, ಡಿ.06 (DaijiworldNews/PY): "ಮಹಾರಾಷ್ಟ್ರದ ಸರ್ಕಾರ ಮುಂಬೈನ ಬೊರೊವಿಲಿಯಲ್ಲಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹತ್ತು ಕೋಟಿ ಹಣ ನೀಡುತ್ತಿದೆ. ಈ ವಿಚಾರವನ್ನು ಅರ್ಥ ಮಾಡಿಕೊಳ್ಳಿ ಹಾಗೂ ಮರಾಠರ ಮೇಲಿನ ದ್ವೇಷವನ್ನು ಬಿಟ್ಟು ಬಿಡಿ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ವೊಂದನ್ನು ಪ್ರಕಟಿಸಿ "ಮರಾಠರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನನ್ನ ಬೆಂಬಲ ಇದೆ" ಎಂದಿದ್ದಾರೆ.
ಫೇಸ್ಬುಕ್ ಪೋಸ್ಟ್ನಲ್ಲಿ, "ಮರಾಠರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನನ್ನ ಬೆಂಬಲವಿದೆ. ಏಕೆಂದರೆ, ಶೃಂಗೇರಿ ಮಠವನ್ನು ಟಿಪ್ಪು ಸುಲ್ತಾನನ ಅತಿಕ್ರಮಣದಿಂದ ಮರಾಠರು ಕಾಪಾಡಿದ್ದರು. ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣಕ್ಕೆ ಬಂದು ಲೂಟಿ ಮಾಡಿ ಅಲ್ಲಿದ್ದ ಜನರನ್ನು ಹತ್ಯೆ ಮಾಡುತ್ತಿದ್ದ ಸಂದರ್ಭ ಮರಾಠಿಗರು ಬಂದು ಶ್ರೀರಂಗಪಟ್ಟಣವನ್ನು ಕಾಪಾಡಿದರು.
ಚಿತ್ರದುರ್ಗಕ್ಕೆ ಹೈದರಾಲಿ ಮುತ್ತಿಗೆ ಹಾಕಿದಾಗ ಮರಾಠರು ಬಂದು ಮದಕರಿ ನಾಯಕನಿಗೆ ಸಹಾಯಕ್ಕೆ ಧಾವಿಸುವಾಗ ಮಾರ್ಗ ಮಧ್ಯದಲ್ಲಿ ಹೈದರಾಲಿ ಸೈನಿಕರು ಮಾರಾಠ ಸೈನಿಕರನ್ನು ತಡೆದಿದ್ದು ಹಾಗೂ ಮದಕರಿ ನಾಯಕನ ಸೇನೆಯಲ್ಲಿದ್ದ ಮುಸಲ್ಮಾನರು ಹೈದರಾಲಿ ಕಡೆಗೆ ಬಂದಿದ್ದ ಕಾರಣ ಅಲ್ಲಿ ಮೋಸವಾಯಿತು. ಹೈದರಾಲಿ ಕುತಂತ್ರದಿಮದ ಜೈಲು ಪಾರಾದ ರಾಜಮಾತೆಗೆ ಸಹಾಯ ಮಾಡಿದ್ದು, ಮರಾಠರಯ ಹಾಗೂ ಮೈಸೂರು ರಾಜಮನೆತನಕ್ಕೆ ಮತ್ತೆ ಅಧಿಕಾರ ಸಿಗುವಂತೆ ನೆರವಾಗಿದ್ದು ಮರಾಠರು.
ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ಪಾಳೆಯಗಾರರನ್ನು ಹತ್ಯೆ ಮಾಡುತ್ತಿದ್ದ ಸಂದರ್ಭ ಆ ವೇಳೆ ಬಂದು ಕಾಪಾಡಿದ್ದು ಮರಾಠರು. ಧಾರವಾಡಕ್ಕೆ ಟಿಪ್ಪು ಸುಲ್ತಾನ್ ಮುತ್ತಿಗೆ ಹಾಕಿ ಅಲ್ಲಿದ್ದ ಜನರನ್ನು ಹತ್ಯೆ ಮಾಡುತ್ತಿದ್ದ ವೇಳೆ ಬಂದು ಕಾಪಾಡಿದವರು ಮರಾಠರು.
ಮದಕರಿ ನಾಯಕರು ಕಟ್ಟಿಸಿದ ಚಿತ್ರದುರ್ಗದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಠಕ್ಕೆ ಟಿಪ್ಪು ಸುಲ್ತಾನ್ ಮುತ್ತಿಗೆ ಹಾಕಿ ಆ ದೇವಾಲಯದ ಆವರಣದಲ್ಲಿ ಇರುವ ವಿಗ್ರಹವೊಂದನ್ನು ಧ್ವಂಸ ಮಾಡಿದ್ದಾನೆ. ಅಲ್ಲದೇ, ಮದಕರಿ ನಾಯಕ ನಿರ್ಮಿಸಿದ ನಾಯಕನಹಳ್ಳಿ ಕೆರೆಗೆ ವಿಷ ಹಾಕಿ ಅಲ್ಲಿದ್ದ ಜನರನ್ನು ಕೊಂದಿದ್ದಾನೆ. ಆದರೆ, ಈ ಸತ್ಯ ಬಹಳಷ್ಟು ಮಂದಿಗೆ ತಿಳಿದಿಲ್ಲ. ಏಕೆಂದರೆ, ಇತಿಹಾಸವನ್ನು ತಿರುಚಿ ಬರೆದ ಸುಳ್ಳನ್ನು ಜನರು ನಂಬಿದ್ದಾರೆ. ಇದು ನಮ್ಮ ದುರಂತ" ಎಂದು ಬರೆದಿದ್ದಾರೆ.