ಅಯೋಧ್ಯೆ, ಡಿ.06 (DaijiworldNews/MB) : ಬಾಬರಿ ಮಸೀದಿ ಧ್ವಂಸ ಪ್ರಕರಣ ಘಟಿಸಿ 28 ವರ್ಷವಾಗಿದ್ದು ಈ ಕಾರಣದಿಂದಾಗಿ ಅಯೋಧ್ಯೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಘಟನೆಯು 1992 ರ ಡಿಸೆಂಬರ್ 6 ರಂದು ನಡೆದಿದ್ದು ಪ್ರತಿವರ್ಷ ಡಿಸೆಂಬರ್ 6ನ್ನು ಮಸೀದಿ ಧ್ವಂಸ ದಿನವೆಂದು ಆಚರಿಸಲಾಗುತ್ತದೆ. ಹಾಗೆಯೇ ಮುಸ್ಲಿಂ ಸಮುದಾಯವು ಈ ದಿನವನ್ನು ಕಪ್ಪುದಿನವೆಂದು ಪರಿಗಣಿಸಿದ್ದಾರೆ.
ಹಾಗೆಯೇ ಹಲವರು 16ನೇ ಶತಮಾನದ ಮಸೀದಿಯನ್ನು ಮತ್ತೆ ನಿರ್ಮಿಸುವಂತೆ ಕೋರಿ ರಾಷ್ಟ್ರಪತಿ ಹಾಗೂ ಪ್ರಧಾನಿ ಅವರಿಗೆ ಪತ್ರಗಳನ್ನು ಬರೆದಿದ್ದಾರೆ.
ರಾಮ ಮಂದಿರ ಜನ್ಮ ಭೂಮಿ ವಿಚಾರವಾಗಿ ಉದ್ರೀಕ್ತ ಕರ ಸೇವಕರು ಈ ಕೃತ್ಯ ನಡೆಸಿದ್ದರು. ಇನ್ನು ರಾಮ ಜನ್ಮ ಭೂಮಿ ವಿಚಾರವಾಗಿ 2019ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಿಸುವಂತೆ ಹಾಗೂ ಮಸೀದಿಗೆ ಪರ್ಯಾಯ ಭೂಮಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು.
ಇನ್ನು ಈ ಮಸೀದಿ ಧ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಬಿಜೆಪಿಯ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಸೇರಿದಂತೆ ಎಲ್ಲಾ 32 ಮಂದಿ ಆರೋಪಿಗಳಿಗೆ ಲಖನೌ ವಿಶೇಷ ಸಿಬಿಐ ನ್ಯಾಯಾಲಯ ಸೆಪ್ಟೆಂಬರ್ 30 ರಂದು ಕ್ಲೀನ್ ಚಿಟ್ ನೀಡಿದೆ.