ಕೋಲ್ಕತ್ತಾ, ಡಿ.06 (DaijiworldNews/PY): "ಜನವರಿಯಿಂದ ಪಶ್ಚಿಮ ಬಂಗಾಳದಲ್ಲಿ ಸಿಎಎ ತಿದ್ದುಪಡಿ ಕಾಯ್ದೆ ಜಾರಿಗೊಳ್ಳಲಿದೆ" ಎಂದಿ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ತಿಳಿಸಿದ್ದಾರೆ.
"ಸಿಎಎ ಕಾಯ್ದೆಯಡಿ ಪಶ್ಚಿಮ ಬಂಗಾಳದಲ್ಲಿರುವ ನಿರಾಶ್ರಿತರ ಜನಸಂಖ್ಯೆಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯ ಜನವರಿಯಿಂದ ಆರಂಭವಾಗಲಿದೆ. ನಿರಾಶ್ರಿತರತ್ತ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಸಹಾನುಭೂತಿ ಹೊಂದಿಲ್ಲ" ಎಂದಿದ್ದಾರೆ.
"ನೆರೆಯ ರಾಷ್ಟ್ರಗಳಲ್ಲಿ ಧಾರ್ಮಿಕ ಕಾರಣಗಳಿಂದಾಗಿ ಹೊರದೂಡಲ್ಪಟ್ಟು ಹಾಗೂ ಕಿರುಕುಳ ಎದುರಿಸಿ ಭಾರತಕ್ಕೆ ಆಗಮಿಸುವವರಿಗೆ ಪೌರತ್ವ ನೀಡುವ ಉದ್ದೇಶದಿಂದ ಸಿಎಎ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ" ಎಂದು ಹೇಳಿದ್ದಾರೆ.
ಟಿಎಂಸಿ ನಾಯಕ ಸಚಿವ ಫಿರ್ಹಾದ್ ಹಕೀಮ್ ಅವರು ವಿಜಯವರ್ಗೀಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, "ಪಶ್ಚಿಮ ಬಂಗಾಳದ ಜನರನ್ನು ಮೋಸಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ" ಎಂದಿದ್ದಾರೆ.
"ಬಿಜೆಪಿಯವರ ಪ್ರಕಾರ ಪೌರತ್ವ ಎಂದರೇನು?. ಬಾಂಗ್ಲಾದೇಶದಿಂದ ವಲಸೆ ಬಂದಿರುವ ಮಥುವಾ ಸಮುದಾಯದ ಮಂದಿ ಭಾರತದ ಪ್ರಜೆಗಳಾಗದೇ ಸಂಸತ್ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದಾರೆಯೇ?. ಪಶ್ಚಿಮ ಬಂಗಾಳದ ಜನರನ್ನು ಮೋಸಗೊಳಿಸುವುದನ್ನು ಬಿಜೆಪಿ ನಿಲ್ಲಿಸಬೇಕು" ಎಂದು ಹೇಳಿದ್ದಾರೆ.