ನವದೆಹಲಿ, ಡಿ.06 (DaijiworldNews/PY): ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಗೌರವ ಸಲ್ಲಿಸಿದ್ದಾರೆ.
ಮುಂಬೈಯಲ್ಲಿನ ದಾದಾರ್ನ ಚೈತ್ಯಭೂಮಿಯಲ್ಲಿ ಜನರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ಮಹಾನ್ ಚೇತನಕ್ಕೆ ಗೌರವ ನಮನ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು, "ಮಹಾಪರಿನಿರ್ವಾಣ ದಿನದಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸುವುದು, ಅವರ ಆಲೋಚನೆಗಳು ಹಾಗೂ ಆದರ್ಶಗಳು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತಿವೆ. ನಮ್ಮ ರಾಷ್ಟ್ರಕ್ಕಾಗಿ ಅವರು ಕಂಡ ಕನಸುಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ" ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಕೂಡಾ ಟ್ವೀಟ್ ಮಾಡಿದ್ದು, "ಭವಿಷ್ಯದ ಮತ್ತು ಸರ್ವಾಂಗೀಣ ಸಂವಿಧಾನವನ್ನು ನೀಡುವ ಮೂಲಕ ದೇಶದಲ್ಲಿ ಪ್ರಗತಿ, ಸಮೃದ್ಧಿ ಮತ್ತು ಸಮಾನತೆಗೆ ದಾರಿ ಮಾಡಿಕೊಟ್ಟ ಬಾಬಾಸಾಹೇಬ್ ಅವರಿಗೆ ಮಹಾಪರಿನಿರ್ವಾಣ ದಿನದಂದು ಅಭಿನಂದನೆಗಳು. ಬಾಬಾಸಾಹೇಬ ಅವರು ಹಾಕಿಕೊಟ್ಟ ಹಾದಿಯಲ್ಲಿ ಮೋದಿ ಸರ್ಕಾರ ದಶಕಗಳಿಂದ ವಂಚಿತರಾದ ವರ್ಗಗಳ ಕಲ್ಯಾಣಕ್ಕಾಗಿ ಬದ್ದತೆಯಿಂದ ಕಾರ್ಯನಿರ್ವಹಿಸುತ್ತಿದೆ" ಎಂದಿದ್ದಾರೆ
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದು, "ಶ್ರೇಷ್ಠ ಸಂವಿಧಾನದ ಮೂಲಕ ದೇಶದ ಸಮಗ್ರತೆಗೆ ಕಾರಣೀಭೂತರಾದ ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮಹಾಪರಿನಿರ್ವಾಣ ದಿನದಂದು ಅವರಿಗೆ ಶ್ರದ್ಧಾಪೂರ್ವಕ ನಮನಗಳು. ಸಂವಿಧಾನದ ಸದಾಶಯಗಳನ್ನು ಪಾಲಿಸುವ ಮೂಲಕ ಅದ್ವಿತೀಯ ಮೇಧಾವಿ, ಸಾಮಾಜಿಕ ನ್ಯಾಯ, ಸಮಾನತೆಯ ಹರಿಕಾರ ಅಂಬೇಡ್ಕರ್ ಅವರಿಗೆ ಸಾರ್ಥಕ ಗೌರವಗಳನ್ನು ಸಲ್ಲಿಸೋಣ" ಎಂದು ತಿಳಿಸಿದ್ದಾರೆ.
"ಕಾನೂನಿನ ಮೂಲಕ ನೀಡಿರುವ ಸ್ವಾತಂತ್ರ್ಯ ಎಲ್ಲರಿಗೂ ದೊರಕಬೇಕಾದರೆ, ಸಾಮಾಜಿಕ ಸ್ವಾತಂತ್ರ್ಯ ಅತ್ಯಗತ್ಯ ಎಂದು ಒತ್ತಿ ಹೇಳುವ ಮೂಲಕ ಸಮಾನತೆಯ ಮಹತ್ವವನ್ನು ಸಾರಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಣ್ಯ ಸ್ಮರಣೆಯ ಸಂದರ್ಭದಲ್ಲಿ ನಮನಗಳನ್ನು ಸಲ್ಲಿಸೋಣ" ಎಂದು ಸಚಿವ ಶ್ರೀರಾಮಲು ಟ್ವೀಟ್ ಮೂಲಕ ತಿಳಿಸಿದ್ದಾರೆ.
"ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಆ ಧೀಮಂತ ನಾಯಕನಿಗೆ ಕೋಟಿ ಕೋಟಿ ನಮನಗಳು" ಎಂದು ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದು, "ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಶತ ಶತ ನಮನಗಳು" ಎಂದಿದ್ದಾರೆ.