ನವದೆಹಲಿ, ಡಿ.06 (DaijiworldNews/MB) : ಕೇಂದ್ರದ ಮೂರು ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ರೈತರು ಪಟ್ಟು ಹಿಡಿದಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 11 ದಿನಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 10 ನೇ ದಿನವಾದ ಶನಿವಾರ ರೈತರು ಹಾಗೂ ಸರ್ಕಾರದ ನಡುವೆ ಮಾತುಕತೆ ನಡೆದಿದ್ದು ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿ ಮಾಡಲಾಗಿದೆ.
''ಡಿಸೆಂಬರ್ 8ರಂದು ಭಾರತ ಬಂದ್ ಇದೆ ಆದ್ದರಿಂದ 9ರಂದು ಸಭೆ ನಡೆಯಲಿದೆ'' ಎಂದು ಭಾರತೀಯ ಕಿಸಾನ್ ಸಂಘದ ನಾಯಕ ಬೂಟಾ ಸಿಂಗ್ ತಿಳಿಸಿದ್ದಾರೆ.
ಸರ್ಕಾರ ಕೆಲವೊಂದು ತಿದ್ದುಪಡಿ ಮಾಡುವುದಕ್ಕೆ ಒಪ್ಪಿಕೊಂಡಿದ್ದರೂ ರೈತರು ಮಾತ್ರ ಈ ಕಾಯ್ದೆಯನ್ನೇ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ. ಹಾಗೆಯೇ ಸಭೆಯ ಕೊನೆಯಲ್ಲಿ ರೈತರು ಮೌನ ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ರೈತರು ಹೌದು ಅಥವಾ ಅಲ್ಲ ಎಂದು ಹೇಳುವ ಫಲಕಗಳನ್ನು ಹಿಡಿದುಕೊಂಡು ಸಭೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.
ಇನ್ನು ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಕೃಷಿ ಸಚಿವ ತೊಮರ್, ''ಪ್ರತಿಭಟನೆಯನ್ನು ನಿಲ್ಲಿಸುವಂತೆ ನಾವು ರೈತರಿಗೆ ಮನವಿ ಮಾಡಿದ್ದೇವೆ. ಸರ್ಕಾರ ಹಲವು ಬಾರಿ ಅವರೊಂದಿಗೆ ಚರ್ಚೆ ನಡೆಸಿದ್ದು ಮುಂದಿನ ಸುತ್ತಿನ ಚರ್ಚೆಗೂ ಸರ್ಕಾರ ಸಿದ್ದವಾಗಿದೆ'' ಎಂದು ಹೇಳಿದರು.
ರೈತರು ರವಿವಾರವೂ ಪ್ರತಿಭಟನೆಯನ್ನು ಮುಂದುವರಿಸಿದ್ದು ಹರ್ಯಾಣ-ದೆಹಲಿಯ ಸಿಂಘು ಗಡಿಯಲ್ಲಿ ಮುಂಜಾನೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ.