ನವದೆಹಲಿ, ಡಿ.06 (DaijiworldNews/HR) : 2016ರಲ್ಲಿ ಕರ್ನಾಟಕದಲ್ಲಿ ನಡೆದ ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಆರೋಪಿ ಕುಮಾರಸ್ವಾಮಿ ಈ ಹಿಂದೆ ಸೆಪ್ಟಂಬರ್ ನಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ , ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ಸುಬ್ರಹ್ಮಣಿಯನ್ ಅವರಿದ್ದ ಪೀಠವು ವಿಚಾರಣೆ ನಡೆಸಿದ್ದು, ಅರ್ಜಿ ತಿರಸ್ಕರಿಸಿದೆ.
ಇನ್ನು ಪ್ರಕರಣದ 18 ಆರೋಪಿಗಳ ಪೈಕಿ 17 ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದು, ಪ್ರಕರಣದ ತನಿಖೆಯಲ್ಲೂ ಯಾವುದೇ ಪ್ರಗತಿ ಆಗಿಲ್ಲ ಎಂದು ತಿಳಿಸಿದ ಆರೋಪಿ ಪರ ವಕೀಲ ಶಶಿಕಿರಣ್ ಶೆಟ್ಟಿ, ಹೈಕೋರ್ಟ್ ಆದೇಶದ ಮಾನ್ಯತೆಯನ್ನು ಪ್ರಶ್ನಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ, ಕರ್ನಾಟಕ ಶಿಕ್ಷಣ ಕಾಯ್ದೆಯಡಿ 2016 ಮಾ.21ರಂದು ಪ್ರಕರಣ ದಾಖಲಿಸಲಾಗಿದ್ದು, ಹಣಕ್ಕಾಗಿ ಪ್ರಶ್ನೆಪತ್ರಿಕೆಯನ್ನು ಹಂಚುತ್ತಿದ್ದ ಆರೋಪದಡಿ 2016 ಏ.17ರಂದು ಕುಮಾರಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದರು.