ಬೆಳಗಾವಿ, ಡಿ.05 (DaijiworldNews/MB) : ಲವ್ ಜಿಹಾದ್ಗೆ ತಡೆ ಹಾಕುವ ಹಾಗೂ ಗೋ ಹತ್ಯೆ ನಿಷೇಧಕ್ಕೆ ಆಗ್ರಹಿಸಿ ಬಿಜೆಪಿ ಪಕ್ಷದ ರಾಜ್ಯ ಕಾರ್ಯಕಾರಿಣಿ ನಿರ್ಣಯ ಕೈಗೊಳ್ಳಲಾಗಿದೆ. ಈ ವಿಚಾರದಲ್ಲಿ ಸರ್ಕಾರ ಮುಂದೆ ನಿರ್ಣಯ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಶನಿವಾರ ನಡೆದ ಕಾರ್ಯಕಾರಿಣಿ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಪ್ರೀತಿ–ಪ್ರೇಮದ ಹೆಸರಿನಲ್ಲಿ ಮತಾಂತರ ಮಾಡಿದ ಹಲವು ಪ್ರಕರಣಗಳು ವರದಿಯಾಗಿದೆ. ಈ ಹಿನ್ನೆಲೆ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ'' ಎಂದರು.
ಇನ್ನು, ''ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರು ಗೆಲ್ಲುವ ಮೂಲಕ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಲ್ಲಿ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕೆಂದು ಕೂಡಾ ನಿರ್ಣಯಿಸಲಾಗಿದೆ. ಚುನಾವಣಾ ನಿರ್ವಹಣಾ ಸಮಿತಿ ಹಾಗೂ ಶಿಸ್ತು ಸಮಿತಿ ರಚಿಸಲು ತೀರ್ಮಾನಿಸಲಾಗಿದೆ'' ಎಂದು ಮಾಹಿತಿ ನೀಡಿದರು.
''ಕಾರ್ಯಕಾರಿಣಿಯು ತೀರ್ಮಾನದಂತೆ ಯಶಸ್ವಿಯಾಗಿ ನಡೆದಿದೆ. ಕೊರೊನಾ ಕಾರಣದಿಂದಾಗಿ ಹಲವು ಮಂದಿ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡಿದ್ದರು'' ಎಂದು ತಿಳಿಸಿದರು.
''ಇನ್ನು ಸಚಿವ ಸಂಪುಟದ ವಿಸ್ತರಣೆ ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಸಮಯ ನೋಡಿ ಕೇಂದ್ರ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ'' ಎಂದು ತಿಳಿಸಿದರು.