ನವದೆಹಲಿ,ಡಿ.05 (DaijiworldNews/HR): ಹರ್ಯಾಣ ಸಚಿವ ಅನಿಲ್ ವಿಜ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಅವರು ಕೊರೊನಾ ದೇಶದಲ್ಲೇ ಅಭಿವೃದ್ಧಿ ಪಡಿಸಿದ್ದ ಕೋವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಅನ್ನು ಪಡೆದಿರಲಿಲ್ಲ ಎಂದು ಕೋವ್ಯಾಕ್ಸಿನ್ ಲಸಿಕೆಯ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ತಿಳಿಸಿದೆ.
ನವೆಂಬರ್ 20ರಂದು ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅವರು, ಹರ್ಯಾಣದ ಆಂಬಾಲದಲ್ಲಿ ನಡೆದಿದ್ದ ಪ್ರಯೋಗಾರ್ಥ ಪರೀಕ್ಷೆಯಲ್ಲಿ ಲಸಿಕೆಯ ಒಂದು ಡೋಸ್ ಅನ್ನು ಹಾಕಿಸಿಕೊಳ್ಳುವ ಮೂಲಕ ಪ್ರಯೋಗಕ್ಕೆ ಒಳಪಟ್ಟಿದ್ದರು. ಆದರೆ ಇದೀಗ ಅವರಿಗೆ ಸೋಂಕು ತಗುಲಿರುವುದು ಲಸಿಕೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸುವಂತಿದ್ದು,ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಈ ಕುರಿತು ಸ್ಫಷ್ಟನೆ ನೀಡಿರುವ ಭಾರತ್ ಬಯೋಟೆಕ್ ಸಂಸ್ಥೆ, ಕೋವ್ಯಾಕ್ಸಿನ್ ಲಸಿಕೆಯಯನ್ನು 28 ದಿನಗಳ ಅಂತರದಲ್ಲಿ ನೀಡಲಾಗುವ ಎರಡು ಡೋಸ್ಗಳ ಶೆಡ್ಯೂಲ್ ಆಧರಿಸಿದ್ದಾಗಿದ್ದು, ವ್ಯಕ್ತಿಗೆ ಎರಡನೇ ಡೋಸ್ ನೀಡಿದ 14 ದಿನಗಳ ಬಳಿಕ, ಲಸಿಕೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಸ್ವಯಂ ಸೇವಕರು ಎರಡೂ ಡೋಸ್ ಪಡೆದ ನಂತರವಷ್ಟೇ ಕೋವ್ಯಾಕ್ಸಿನ್ ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿಸಿದೆ.
ನ. 20ರಂದು ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ಆರಂಭವಾದ ದಿನ ಅನಿಲ್ ವಿಜ್ ತಾವೇ ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಂಡಿದ್ದರು. ಈ ಮೂಲಕ ಮೂರನೇ ಹಂತದ ಕೋವ್ಯಾಕ್ಸಿನ್ ಲಸಿಕೆ ಪಡೆದ ಮೊದಲ ವಾಲಂಟಿಯರ್ ಆಗಿದ್ದರು. ಅದಾಗಿ 28 ದಿನಗಳ ಬಳಿಕ ಅವರಿಗೆ ಎರಡನೇ ಡೋಸ್ ನೀಡಬೇಕಿತ್ತು. ಆದರೆ ಅದಕ್ಕೂ ಮೊದಲೇ ಅವರಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ.