ಬೆಳಗಾವಿ, ಡಿ.05 (DaijiworldNews/MB) : ನಗರದ ಗಾಂಧಿ ಭವನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆರಂಭವಾಗಿದೆ. ಏತನ್ಮಧ್ಯೆ ಮರಾಠಾ ಅಭಿವೃದ್ಧಿ ನಿಗಮ ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕಾರ್ಯಕಾರಿಣಿ ಸಭೆಗೆ ಮುತ್ತಿಗೆ ನಡೆಸಲು ಯತ್ನ ಮಾಡಿದ್ದು ಪೊಲೀಸರು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ನಡೆಸಲು ಬಿಜೆಪಿ ನಿರ್ಧರಿಸಿದ್ದು ಈ ಹಿಂದೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ ನಡೆದಿತ್ತು. ಶನಿವಾರ ಬೆಳಗಾವಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿದೆ.
ಶನಿವಾರದಂದೇ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದು ಗಾಂಧಿ ಭವನದಲ್ಲಿ ನಡೆದಿರುವ ಬಿಜೆಪಿ ರಾಜ್ಯ ಕಾರ್ಯಕಾರಣಿಗೆ ಮುತ್ತಿಗೆ ಹಾಕಲು ಹೊರಟ್ಟಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಇನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಕೆ.ಎಸ್. ಈಶ್ವರಪ್ಪ, ಜಗದೀಶ ಶೆಟ್ಟರ್, ರಮೇಶ್ ಜಾರಕಿಹೊಳಿ, ಆರ್. ಅಶೋಕ್, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ರಾಜ್ಯ ಘಟಕದ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಉಪಸ್ಥಿತರಿದ್ದರು.