ಬೆಳಗಾವಿ, ಡಿ.05 (DaijiworldNews/MB) : ''ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು'' ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಬಗ್ಗೆ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭದ ಸಾಧ್ಯತೆಯಿದೆ. ಈ ಕಾರಣದಿಂದಾಗಿ ಹೊಸ ವರ್ಷಾಚರಣೆಯನ್ನು ನಿಯಂತ್ರಿಸಬೇಕಾಗಿದೆ. ಹಾಗೆಯೇ ರಾಜ್ಯದಲ್ಲಿ ರಾತ್ರಿಯಲ್ಲಿ ಕರ್ಫ್ಯೂ ಜಾರಿಗೆ ತರಬೇಕೇ ಬೇಡವೇ ಎಂದು ಸಿಎಂ ಜೊತೆ ಚರ್ಚಿಸಿ ಶೀಘ್ರವೇ ನಿರ್ಧರಿಸಲಾಗುವುದು'' ಎಂದರು.
''ಮೊದಲು ಆರೋಗ್ಯ ಇಲಾಖೆಯಿಂದ ಈ ಬಗ್ಗೆ ಎಲ್ಲಾ ವರದಿಯನ್ನು ಪಡೆಯಲಾಗುವುದು ಬಳಿಕ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು'' ಎಂದರು.