ಮೈಸೂರು, ಡಿ.05 (DaijiworldNews/PY): "ರಾಜ್ಯದಲ್ಲಿ ಬಿಜೆಪಿಗೆ 105 ಸ್ಥಾನ ಬರಲು ಸಿದ್ದರಾಮಯ್ಯ ಅವರು ಕಾರಣ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಪದೇ ಪದೇ ನಮ್ಮ ಪಕ್ಷವನ್ನು ಬಿ ತಂಡ ಎಂದು ಕರೆಯುತ್ತಿದ್ದು, ಬಿಜೆಪಿಗೆ ಹೆಚ್ಚು ಸ್ಥಾನ ಬರುವಂತೆ ಮಾಡಿದ್ದಾರೆ" ಎಂದಿದ್ದಾರೆ.
ಉಪಚುನಾವಣೆಯಲ್ಲಾದ ಸೋಲಿನ ವಿಚಾರವಾಗಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಸಿದ್ದರಾಮಯ್ಯ ಅವರು ಜಿಡಿಎಸ್ ಅನ್ನು ಹಗುರವಾಗಿ ಕಾಣಬಾರದು ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಕಾಂಗ್ರೆಸ್ನ ಸೋಲು ಅಥವಾ ಗೆಲುವು ಜೆಡಿಎಸ್ ಪಕ್ಷದ ಮೇಲೆ ಇದೆ ಎನ್ನುವ ವಿಚಾರ ಕಾಂಗ್ರೆಸ್ನ ಮಾಜಿ ಸಿಎಂನ ಹೇಳಿಕೆಯಿಂದ ತಿಳಿಯುತ್ತದೆ" ಎಂದು ತಿಳಿಸಿದ್ದಾರೆ.
"ಸಿದ್ದರಾಮಯ್ಯ ಅವರು ಯಾರನ್ನು ಯಾವಾಗ ಭೇಟಿ ಮಾಡುತ್ತಾರೆ ಎನ್ನುವ ವಿಚಾರ ನನಗೆ ತಿಳಿದಿದೆ. ಸಿದ್ದರಾಮಯ್ಯ ಅವರು ಮೊನ್ನೆಯೂ ಕೂಡಾ ಯಾರನ್ನೋ ಭೇಟಿಯಾಗಿದ್ದಾರೆ ಎಂಬುದು ನನಗೆ ಗೊತ್ತಿದೆ. ನಾನು ಸಿಎಂ ಅವರನ್ನು ಭೇಟಿ ಮಾಡಿದ್ದರೂ ಕದ್ದಮುಚ್ಚಿ ಭೇಟಿ ಮಾಡುವುದಿಲ್ಲ" ಎಂದು ಹೇಳಿದ್ದಾರೆ.