ಬೆಂಗಳೂರು, ಡಿ.05 (DaijiworldNews/HR): ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಸೇರಿದಂತೆ ಅನೇಕ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಬೆಂಗಳೂರಿನ ಟೌನ್ ಹಾಲ್ ಪಕ್ಕದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಸಾ.ರಾ. ಗೋವಿಂದ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ತೀವ್ರವಾದ ಹಿನ್ನಲೆಯಲ್ಲಿ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದ್ದಾರೆ.
ಇನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ನಾರಾಯಣಗೌಡ ನೇತೃತ್ವದಲ್ಲಿ ಗಾಂಧಿನಗರ, ಮೌರ್ಯ ವೃತ್ತ, ರೇಸ್ ಕೋರ್ಸ್ ರಸ್ತೆ, ಶಿವಾನಂದ ಸರ್ಕಲ್ ಗಳ ಮೂಲಕ ಸಿಎಂ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಯತ್ನಿಸಿದ್ದು,ಈ ವೇಳೆ ನಾರಾಯಣಗೌಡ ಹಾಗೂ ಅನೇಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.