ನವದೆಹಲಿ, ಡಿ.05 (DaijiworldNews/PY): "ಭಾರತದ ಕೃಷಿ ಹಾಗೂ ಕನಿಷ್ಠ ಬೆಂಬಲ ಬೆಲೆ ವಿಚಾರವನ್ನು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಟೀಕೆ ಮಾಡಿರುವ ಕೆನಡಾ, ಇದೀಗ ಭಾರತದ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವ ಮುಖೇನ ನಮ್ಮ ದೇಶದ ರೈತರ ಬಗೆಗಿನ ತೋರಿಕೆಯ ಕಾಳಜಿ ಪ್ರದರ್ಶಿಸುತ್ತಿದೆ" ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ವಿದೇಶಾಂಗ ವ್ಯವಹಾರಗಳ ಉಸ್ತುವಾರಿ ವಿಜಯ್ ಚೌಥೈವಾಲೆ ಅವರು, "ಕೆನಡಾ, ಭಾರತದ ರೈತರ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಆಮದು ಮೇಲಿನ ನಿರ್ಬಂಧ ಗಳನ್ನು ವಿರೋಧಿಸುತ್ತದೆ. ಭಾರತದ ಕೃಷಿ ನೀತಿಗಳ ಬಗ್ಗೆ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಪ್ರಶ್ನಿಸುತ್ತದೆ. ಭಾರತದ ರೈತರ ಹಾಗೂ ಕೃಷಿ ಉತ್ಪಾದಕರ ಬಗ್ಗೆ ಕೆನಡಾಕ್ಕೆ ವಿರಳವಾದ ಆಸಕ್ತಿ ಇದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ" ಎಂದಿದ್ದಾರೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಇತ್ತೀಚೆಗೆ ಭಾರತದಲ್ಲಿ ಆಂದೋಲನ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡಿದ್ದು, "ಹಕ್ಕುಗಳ ರಕ್ಷಣೆಗಾಗಿ ನಡೆಯುವ ಶಾಂತಿಯುತವಾದ ಪ್ರತಿಭಟನೆಗಳಿಗೆ ಎಂದಿಗೂ ನಮ್ಮ ಬೆಂಬಲವಿರುತ್ತದೆ" ಎಂದು ತಿಳಿಸಿದ್ದರು.