ಚನ್ನರಾಯಪಟ್ಟಣ, ಡಿ.05 (DaijiworldNews/HR): ಮಾಜಿ ಪ್ರಧಾನಿ ದೇವೇಗೌಡರನ್ನು ಲೋಕಸಭಾ ಚುನಾವಣೆಯಲ್ಲಿ ಕಣ್ಣೀರು ಹಾಕಿಸಿದ ಶಾಪ ಆದಷ್ಟು ಬೇಗ ತುಮಕೂರಿಗೆ ತಟ್ಟಲಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಈ ಕುರಿತು ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, "ತುಮಕೂರು ಜಿಲ್ಲೆಯನ್ನು ಪೂರ್ಣವಾಗಿ ನೀರಾವರಿ ಮಾಡಲು ಮಾಜಿ ಪ್ರಧಾನಿ ದೇವೇಗೌಡರು ಹಗಲಿರುಳು ಶ್ರಮಿಸಿದ್ದಾರೆ, ಆದರೆ ಅಲ್ಲಿರುವ ಮುಖಂಡರು ಅವರನ್ನೇ ಕಣಕ್ಕೆ ಇಳಿಸಿ, ವಿಶ್ವಾಸ ದ್ರೋಹ ಮಾಡಿದ್ದಾರೆ. ಹಾಗಾಗಿ ಅಂತವರಿಗೆ ಆ ದೇವರೇ ಶಿಕ್ಷೆಕೊಡುತ್ತಾನೆ" ಎಂದರು.
ಇನ್ನ "ದೇವೇಗೌಡರು ಹಾಗೂ ಜೆಡಿಎಸ್ ಪಕ್ಷವನ್ನು ಮುಗಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿದ್ದು, ಈ ವಿಚಾರ ಇನ್ನು ಹೆಚ್ಚು ದಿನ ನಡೆಯುವುದಿಲ್ಲ, ದೇವೇಗೌಡರ ಮಾರ್ಗದರ್ಶನ, ಯುವಕರಾದ ನಿಖಿಲ್ ಮತ್ತು ಪ್ರಜ್ವಲ್ ಮೂಲಕ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ" ಎಂದು ಹೇಳಿದ್ದಾರೆ.