ಬೆಳಗಾವಿ, ಡಿ.05 (DaijiworldNews/PY): "ಯಾರನ್ನೂ ಕೂಡಾ ವಿರೋಧ ಮಾಡಿ ಕನ್ನಡ ಬೆಳೆಸುವ ಅವಶ್ಯಕತೆ ಇಲ್ಲ" ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕನ್ನಡಪರ ಹೋರಾಟಗಾರರಿಗೆ ಹೇಳಿದರು.
ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯ ಹಿನ್ನೆಲೆ ಬೆಳಗಾವಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕ ಬಂದ್ಗೆ ಕರೆ ನೀಡಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಜನರೂ ಇದ್ದಾರೆ ಎನ್ನುವ ವಿಚಾರ ಬಹಳಷ್ಟು ಮಂದಿಗೆ ತಿಳಿದಿಲ್ಲ. ಆರು ಕೋಟಿ ಕನ್ನಡಿಗರ ಜವಾಬ್ದಾರಿ ಕರ್ನಾಟಕ ಸರ್ಕಾರದ ಜವಾಬ್ದಾರಿಯಾಗಿದೆ. ಎಲ್ಲಾ ಜಾತಿ ಹಾಗೂ ಎಲ್ಲಾ ಸಮುದಾಯದ ಏಳಿಗೆ ಸರ್ಕಾರದ ಕರ್ತವ್ಯವೇ ಆಗಿದೆ. ಈ ನಿಟ್ಟಿನಲ್ಲಿ ಸಿಎಂ ಬಿಎಸ್ವೈ ಅವರು ತೀರ್ಮಾನ ಕೈಗೊಂಡಿದ್ದಾರೆ" ಎಂದು ತಿಳಿಸಿದರು.
"ಬಂದ್ಗೆ ಕರೆ ನೀಡಿರುವುದು ಸರಿಯಲ್ಲ. ಇಂದಿನ ಬಂದ್ಗೆ ಯಾವುದೇ ಫಲ ದೊರೆಯುವುದಿಲ್ಲ. ಮೊದಲು ಬಂದ್ ಮಾಡುವ ವಿಚಾರ ನಿಲ್ಲಬೇಕು" ಎಂದರು.
ಸರ್ಕಾರದೊಂದಿಗೆ ಕುಳಿತು ಚರ್ಚಿಸುವಂತೆ ಕನ್ನಡ ಸಂಘಟನೆ ಮುಖಂಡರಿಗೆ ಮನವಿ ಮಾಡಿದ ಅವರು, "ಸರ್ಕಾರ ಹಾಗೂ ಬಿಎಸ್ವೈ ಅವರು ನಿಮ್ಮ ಮಾತುಗಳನ್ನು ಕೇಳಲು ತಯಾರಿದ್ದಾರೆ" ಎಂದು ಹೇಳಿದರು.