ಹೈದರಾಬಾದ್, ಡಿ.05 (DaijiworldNews/PY): ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, 150 ಸೀಟುಗಳ ಪೈಕಿ 56ರಲ್ಲಿ ಜಯ ಸಾಧಿಸುವ ಮುಖೇನ ಟಿಆರ್ಎಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಅದೇ ರೀತಿ ಬಿರುಸಿನ ಚುನಾವಣೆ ನಡೆಸಿದ್ದ ಬಿಜೆಪಿ ಕೂಡಾ ಉತ್ತಮ ಸಾಧನೆ ಪ್ರದರ್ಶಿಸಿದೆ. ಅಲ್ಲದೇ, 49 ಸ್ಥಾನಗಳನ್ನು ಗಳಿಸುವ ಮೂಲಕ ಸಾಧನೆಗೈದಿದೆ. ಇನ್ನು ಅಸಾಸುದ್ದೀನ್ ನೇತೃತ್ವದ ಎಐಎಂಐಎಂ ಪಕ್ಷವು 43 ಸ್ಥಾನಗಳಲ್ಲಿ ಜಯ ಸಾಧಿಸುವ ಮುಖೇನ ಹಳೆ ಹೈದರಾಬಾದ್ ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಇನ್ನು ಕಾಂಗ್ರೆಸ್ನ ಇಬ್ಬರು ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ.
2016ರ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಕೇವಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಯುಪಿ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಹಾಗೂ ಬಿಜೆಪಿ ನಾಯಕರು ಚುನಾವಣಾ ಪ್ರಚಾರ ನಡೆಸಿದ್ದರು. ಆದರೆ, ಜಿಎಚ್ಎಂಸಿ ಆಡಳಿತ ಕೈಗೆತ್ತಿಕೊಳ್ಳುವಲ್ಲಿ ವಿಫಲವಾಗಿದ್ದು, ಆದರೆ, 49 ಸ್ಥಾನಗಳನ್ನು ಗೆಲ್ಲುವ ಮುಖೇನ ಪಕ್ಷ ಅತ್ಯುತ್ತಮ ಸಾಧನೆಗೈದಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2016ರ ಚುನಾವಣೆಯಲ್ಲಿ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಟಿಆರ್ಎಸ್ 150ರ ಪೈಕಿ 99 ವಾರ್ಡ್ಗಳಲ್ಲಿ ಜಯ ಗಳಿಸಿತ್ತು.
"ಈ ಬಾರಿಯ ಚುನಾವಣೆಯಲ್ಲಿ ಈ ರೀತಿಯಾದ ಫಲಿತಾಂಶವನ್ನು ನಾವು ನಿರೀಕ್ಷಿಸಿರಲಿಲ್ಲ. ಆದರೂ ಕೂಡಾ ನಾವು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಸಮಾಧಾನವಾಗಿದೆ" ಎಂದು ಸಿಎಂ ಕೆ.ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
"ಈ ಫಲಿತಾಂಶ ಬಿಜೆಪಿಗೆ ದೊರಕಿದ ನೈತಿಕ ಗೆಲುವಾಗಿದೆ. ರಾಜ್ಯದಲ್ಲಿ ಟಿಆರ್ಎಸ್ಗೆ ಬಿಜೆಪಿ ಮಾತ್ರ ಪರ್ಯಾಯ ಎನ್ನುವ ವಿಷಯ ಸಾಬೀತಾಗಿದೆ" ಎಂದು ಬಿಜೆಪಿ ತಿಳಿಸಿದೆ.