ಬೆಂಗಳೂರು, ಡಿ.05 (DaijiworldNews/PY): ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿ ಅವರ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದ್ದು, ಆದೇಶವನ್ನು ಡಿ.7 ಕಾಯ್ದಿರಿಸಿದೆ.
ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ಕುಮಾರ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆನ್ನು ನಡೆಸಿದ್ದಾರೆ.
"ಸಂಜನಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು 2018ರಲ್ಲಿ ಸರ್ಜರಿಗೂ ಕೂಡಾ ಒಳಗಾಗಿದ್ದರು. ಅಲ್ಲದೇ, 2019ರಿಂದ ಅವರು ಸ್ತಮಾ ಹಾಗೂ ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ. ಚಳಿಗಾಲದ ಸಂದರ್ಭ ಈ ಎಲ್ಲಾ ಸಮಸ್ತೆಗಳು ಹೆಚ್ಚಾಗುವ ಕಾರಣದಿಂದ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ. ಈ ಕಾರಣದಿಂದ ಸಂಜನಾ ಅವರಿಗೆ ಜಾಮೀನು ನೀಡಬೇಕು" ಎಂದು ವಕೀಲ ಅಸ್ಮತ್ ಪಾಷಾ ಮನವಿ ಮಾಡಿದ್ದಾರೆ.
ಈ ವೇಳೆ ಸರ್ಕಾರದ ಪರ ವಕೀಲ ವೀರಣ್ಣ ತಿಗಡಿ ಅವರು ವಾದ ಮಂಡಿಸಿದ್ದು, "ಅನಾರೋಗ್ಯದ ನೆಪದ ಮೇರೆಗೆ ಜಾಮೀನು ನೀಡಿದಲ್ಲಿ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ" ಎಂದಿದ್ದಾರೆ.