ನವದೆಹಲಿ, ಡಿ.05 (DaijiworldNews/PY): "ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಹಾಗೂ ಅಳವಡಿಸಿಕೊಳ್ಳುವುದರಲ್ಲಿ ಭಾರತವು ಯಶಸ್ಸು ಸಾಧಿಸಿದೆ" ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವೇಡಕರ್ ಹೇಳಿದ್ದಾರೆ.
"ಭಾರತವು ಈಗಾಗಲೇ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಿದೆ. ಹಾಗೂ ವಿಭಾಗಗಳನ್ನು ಕೂಡಾ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
"ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ವಿಚಾರವಾಗಿ ತಿಳುವಳಿಕೆ ಮೂಡಿಸಲು ಜಾಗೃತಿ ಆಂದೋಲನಗಳು ಹಾಗೂ ಅಭಿಯಾನಗಳನ್ನು ಮಾಡಲಾಗಿದೆ. ಇದರಲ್ಲಿ ಅದ್ಭುತ ಯಶಸ್ಸು ಗಳಿಸಿದೆ ಹಾಗೂ ಇದಕ್ಕೆ ತಾರ್ಕಿಕ ಅಂತ್ಯ ನೀಡಲಾಗುವುದು" ಎಂದಿದ್ದಾರೆ.
"ಯುಎನ್ಎಫ್ಸಿಸಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಪೆಟ್ರೀಷಿಯಾ ಎಸ್ಪಿನೋಜ ಅವರೊಂದಿಗೆ ಹವಮಾನ ಬದಲಾವಣೆಗೆ ವಿಚಾರದ ಬಗ್ಗೆ ವಿಶ್ವಸಂಸ್ಥೆ ರೂಪಿಸಿರುವ ಚೌಕಟ್ಟಿಗೆ ಸಂಬಂಧಿಸಿ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಇಂದು ಅನೇಕ ದೇಶಗಳು ಹವಾಮಾನ ಬದಲಾವಣೆಯ ಕಾರ್ಯಸೂಚಿಗಳನ್ನು 2025ಕ್ಕೆ ತಳ್ಳುತ್ತಿವೆ" ಎಂದು ಹೇಳಿದ್ದಾರೆ.
"ದೀರ್ಘಾವಧಿಯ ಗುರಿಗಳಿಗಿಂತ ಇಂದು ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಭಾರತ ಮತ್ತು ಫ್ರಾನ್ಸ್ ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆಯ ಬಗ್ಗೆ ಜಂಟಿ ಪ್ರಯತ್ನಗಳನ್ನು ಮಾಡುವ ಪ್ರಸ್ತಾಪವನ್ನು ನಾನು ಸ್ವಾಗತಿಸುತ್ತೇನೆ" ಎಂದು ಹೇಳಿದ್ದಾರೆ.