ಬೆಂಗಳೂರು, ಡಿ. 04 (DaijiworldNews/SM): ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್ ಗಳಿಗೆ ಮುಂದಿನ ಆರು ವಾರಗಳ ಅವಧಿಯಲ್ಲಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದ್ದು, ಕೋರ್ಟ್ ಆದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸ್ವಾಗತಿಸಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವಧಿಗೆ ಅನುಗುಣವಾಗಿ ಚುನಾವಣೆ ನಡೆಯಬೇಕು. ಪ್ರಸ್ತುತ ರಾಝ್ಯದಲ್ಲಿರುವ ಬಿಜೆಪಿ ಸರ್ಕಾರ ಇದನ್ನು ಮುಂದಕ್ಕೆ ತಳ್ಳಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿತ್ತು. ಆದರೆ, ನ್ಯಾಯಾಲಯ ಅದರ ಹುನ್ನಾರಕ್ಕೆ ಕಡಿವಾಣ ಹಾಕಿದ್ದು ಸ್ವಾಗತಾರ್ಹ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಈಗಾಗಲೇ ಘೋಷಣೆಯಾಗಿರುವ ಗ್ರಾಮ ಪಂಚಾಯಿತ್ ಚುನಾವಣೆಯನ್ನು ಕೂಡ ಮುಂದೂಡಲು ಬಿಜೆಪಿಯವರು ಪ್ರಯತ್ನಿಸಿದ್ದರು. ಜನಸಾಮಾನ್ಯರಿಗೆ ಅಧಿಕಾರ ಸಿಗಬೇಕು ಎಂಬುದು ಕಾಂಗ್ರೆಸ್ ಉದ್ದೇಶ. ಹೀಗಾಗಿ ಸರ್ಕಾರದ ತೀರ್ಮಾನದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದೇವು. ಆ ಸಂದರ್ಭದಲ್ಲೂ ನ್ಯಾಯಾಲಯ ನಮ್ಮ ಅಹವಾಲಿಗೆ ಮನ್ನಣೆ ನೀಡಿತ್ತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.