ನವದೆಹಲಿ, ಡಿ.04 (DaijiworldNews/PY): "ಪ್ರಥಮ ಸುತ್ತಿನಲ್ಲಿ ಬಿಡುಗಡೆಯಾಗಲಿರುವ ಕೊರೊನಾ ಲಸಿಕೆಯನ್ನು ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ದೇಶದ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತದೆ. ವೃದ್ಧರಿಗೆ ಹಾಗೂ ಮುಂಚೂಣಿ ಕಾರ್ಮಿಕರಿಗೆ ಆದ್ಯತೆ ನೀಡಲಾಗುತ್ತದೆ" ಎಂದು ಶುಕ್ರವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸರ್ವಪಕ್ಷಗಳ ಸಭೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ದೇಶದಲ್ಲಿರುವ ಕೊರೊನಾದ ಸ್ಥಿತಿಗತಿ ಸೇರಿದಂತೆ ಲಸಿಕೆ ಪೂರೈಕೆಯ ಬಗ್ಗೆ ಮಾಹಿತಿ ನೀಡಿದರು.
"ಮೊದಲ ಹಂತದಲ್ಲಿ ವೈದ್ಯರು ಸೇರಿದಂತೆ ನರ್ಸ್ಗಳು ಹಾಗೂ ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಎರಡನೇ ಹಂತದಲ್ಲಿ ಎರಡು ಕೋಟಿ ಪೊಲೀಸ್ ಸಶಸ್ತ್ರಪಡೆ, ಯೋಧರು ಹಾಗೂ ಪೌರಕಾರ್ಮಿಕರು ಸೇರಿದಂತೆ ಕೊರೊನಾ ವಾರಿಯರ್ಸ್ಗಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ" ಎಂದು ಮೂಲಗಳು ತಿಳಿಸಿವೆ.
"ಲಸಿಕೆಯ ಬೆಲೆಯ ವಿಚಾರವಾಗಿ ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಸಾರ್ವಜನಿಕ ಆರೋಗ್ಯವನ್ನು ಮೊದಲ ಆದ್ಯತೆಯಾಗಿಟ್ಟುಕೊಂಡು ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಇದರಲ್ಲಿ ರಾಜ್ಯ ಸರ್ಕಾರಗಳು ಪ್ರಮುಖ ಪಾತ್ರವಹಿಸಿವೆ" ಎಂದು ಪ್ರಧಾನಿ ಮೋದಿ ಹೇಳಿದರು.
"ದೇಶದಲ್ಲಿ ಸದ್ಯ ಎಂಟು ಲಸಿಕೆಗಳು ಹಲವು ಹಂತದ ಪ್ರಯೋಗದಲ್ಲಿವೆ. ಆ ಲಸಿಕೆಗಳ ಉತ್ಪಾದನಾ ಭರವಸೆ ಭಾರತದಲ್ಲಿದೆ. ಕೊರೊನಾ ಲಸಿಕೆಗಾಗಿ ಹೆಚ್ಚು ಕಾಯುವ ಅವಶ್ಯಕತೆ ಇಲ್ಲ. ಕೆಲವೇ ವಾರಗಳಲ್ಲಿ ಲಭ್ಯವಾಗಬಹುದು ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ" ಎಂದು ತಿಳಿಸಿದರು.
"ವಿಜ್ಞಾನಿಗಳು ಲಸಿಕೆ ಬಳಕೆಗೆ ಅನುಮತಿ ನೀಡಿದ ಕೂಡಲೇ ದೇಶದಲ್ಲಿ ಲಸಿಕೆ ಹಾಕುವ ಆಂದೋಲನ ಪ್ರಾರಂಭವಾಗುವುದು" ಎಂದು ತಿಳಿಸಿದರು.
"ವ್ಯಾಕ್ಸಿನೇಷನ್ ಸಂದರ್ಭ ಯಾವುದೇ ರಾಷ್ಟ್ರ ವಿರೋಧಿ ಹಾಗೂ ಮಾನವ ವಿರೋಧಿ ವದಂತೆಗಳು ಹರಡದಂತೆ ಗಮನವಹಿಸಬೇಕು" ಎಂದು ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರಧಾನಿ ಮನವಿ ಮಾಡಿದರು.
ಬೆಳಗ್ಗೆ 10.30ಕ್ಕೆ ಪ್ರಾರಂಭವಾದ ವರ್ಚುವಲ್ ಸರ್ವಪಕ್ಷಗಳ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷ್ ವರ್ಧನ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸಚಿವರು ಅರ್ಜುನ್ ರಾಮ್ ಮೇಘವಾಲ್ ಹಾಗೂ ವಿ ಮುರಳೀಧರನ್, ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಹಾಗೂ ರಾಜ್ಯಸಭೆಯ ಎಲ್ಲಾ ಪ್ರಮುಖ ಪಕ್ಷಗಳ ಮುಖಂಡರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಪರವಾಗಿ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ, ಎನ್ಸಿಪಿಯ ಶರದ್ ಪವಾರ್, ಟಿಆರ್ಎಸ್ನ ನಾಮ ನಾಗೇಶ್ವರ ರಾವ್ ಮತ್ತು ಶಿವಸೇನೆಯ ವಿನಾಯಕ ರೌತ್ ಭಾಗವಹಿಸಿದ್ದರು.