ದಾವಣಗೆರೆ, ಡಿ.04 (DaijiworldNews/PY): "ಶಿವಮೊಗ್ಗದಲ್ಲಿ ಮುಸ್ಲಿಮರ ಗೂಂಡಾಗಿರಿ ಪುನಃ ಆರಂಭವಾಗಿದೆ. ಗೂಂಡಾಗಿರಿ ಮಾಡಿದವರನ್ನು ತಕ್ಷಣವೇ ಬಂಧಿಸಲಾಗುವುದು" ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶುಕ್ರವಾರ ದಾವಣೆಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶಿವಮೊಗ್ಗದಲ್ಲಿ ನಡೆದ ಘಟನೆ ಒಂದು ರೀತಿ ಗೂಂಡಾಗಿರಿಯಾಗಿದೆ. ಇಲ್ಲಿ ಪುನಃ ಗೂಂಡಾಗಿರಿ ಆರಂಭವಾಗಿದೆ. ಗೂಂಡಾಗಿರಿ ಮಾಡಿದವರನ್ನು ತಕ್ಷಣವೇ ಬಂಧಿಸಲಾಗುವುದು. ಗುರುವಾರ ಹಲ್ಲೆಗೊಳಗಾದ ವ್ಯಕ್ತಿಯನ್ನು ಭೇಟಿ ಮಾಡಿದ್ದೇನೆ. ಈ ಘಟನೆಯಿಂದ ನನಗೆ ತುಂಬಾ ಬೇಸರವಾಗಿದೆ. ಸೂಕ್ತವಾದ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ" ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ರಾಜ್ಯ ಸರ್ಕಾರವು ಸಂಪೂರ್ಣವಾಗಿ ಗೋಹತ್ಯೆ ಕಾಯ್ದೆಯನ್ನು ಜಾರಿಗೆ ತರಲಿದೆ. ಈ ಕಾಯ್ದೆಯ ಬಗ್ಗೆ ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚೌಹಾಣ್ ಅವರು ಉತ್ತೆಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಕಾಯ್ದೆಯ ಬಗ್ಗೆ ರಾಜ್ಯದಲ್ಲೂ ಕೂಡಾ ಚರ್ಚೆ ನಡೆಸಿ ಜಾರಿಗೆ ತರಲಾಗುವುದು" ಎಂದು ಹೇಳಿದರು.
"ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಎಸ್ವೈ ಸರ್ಕಾರಗಳು ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡುತ್ತಿವೆ. ಪಕ್ಷವನ್ನು ಸಂಘಟಿಸುವ ಸಲುವಾಗಿ ರಾಜ್ಯಾದ್ಯಂತ ಬಿಜೆಪಿಯಿಂದ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ನಡೆಸುತ್ತಿದ್ದೇವೆ" ಎಂದರು.