ಬೆಂಗಳೂರು, ಡಿ. 04 (DaijiworldNews/HR): ರಾಜ್ಯದಲ್ಲಿ ಕೊರೊನಾದ 2ನೇ ಅಲೆ ಬರುವ ಸಾಧ್ಯತೆ ಇದ್ದು ಡಿಸೆಂಬರ್ 20ರಿಂದ ಜನವರಿ 2ರವರೆಗೆ ಎಲ್ಲಾ ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾತ್ರಿ ಕರ್ಫ್ಯೂ ಜಾರಿ ಮಾಡುವ ಕುರಿತು ಇನ್ನು ಚರ್ಚೆಯಾಗಿಲ್ಲ, ತಾಂತ್ರಿಕ ಸಲಹಾ ಸಮಿತಿ ಕೂಡ ಆ ಕುರಿತು ಯಾವುದೇ ಸಲಹೆ ನೀಡಿಲ್ಲ. ಹಾಗಾಗಿ ನೈಟ್ ಕರ್ಫ್ಯೂ ಪ್ರಶ್ನೆಯೇ ಇಲ್ಲ" ಎಂದರು.
ಇನ್ನು ಜನವರಿ ಫೆಬ್ರವರಿಯಲ್ಲಿ ರಾಜ್ಯದಲ್ಲಿ ಕೊರೊನಾದ 2ನೇ ಅಲೆ ಬರುವ ಸಾಧ್ಯತೆ ಇದ್ದು, ಅದಕ್ಕೆ ತಜ್ಞರ ಸಮಿತಿ ಸ್ಪಷ್ಟ ಮಾಹಿತಿ ನೀಡಿದೆ. ಮುಂದಿನ 45 ದಿನ ಮಹತ್ವದ್ದಾಗಿದೆ. ಲಾಕ್ ಡೌನ್ ಸಮಯದಲ್ಲಿ ತೆಗೆದುಕೊಂಡ ಕ್ರಮಗಳನ್ನು ಮತ್ತೆ ತೆಗೆದುಕೊಳ್ಳುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.
ಕೊರೊನಾ ತಡೆಗಟ್ಟುವುದಕ್ಕಾಗಿ ಜನರು ಗುಂಪು ಸೇರುವುದನ್ನು ನಿಯಂತ್ರಿಸಬೇಕು ಮತ್ತು ಧಾರ್ಮಿಕ ಹಬ್ಬಗಳು, ಮದುವೆ ಸಮಾರಂಭಗಳಿಗೆ 100 ಜನ ಮೀರದಂತೆ ನೋಡಿಕೊಳ್ಳಬೇಕು. ಇನ್ನು ಶಾಲೆ ಕಾಲೇಜುಗಳ ಆರಂಭದ ಕುರಿತು ಡಿಸೆಂಬರ್ ಕೊನೆಯ ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.