ನವದೆಹಲಿ, ಡಿ.04 (DaijiworldNews/HR): ಬಾಲಿವುಡ್ ನಟಿ ಕಂಗನಾ ರಣಾವತ್ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಮತ್ತು ಕಾರ್ಯಕರ್ತರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದು, ಈ ಕುರಿತು ನೋಟಿಸ್ ನೀಡಿರುವ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್ಜಿಎಂಸಿ), ಬೇಷರತ್ತಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.
ಪ್ರತಿಭಟನಾಕಾರರ ಕುರಿತು ಕಂಗನಾ ಮಾಡಿರುವ ಅವಹೇಳನಕಾರಿ ಟ್ವೀಟ್ಗಳನ್ನು ತಕ್ಷಣವೇ ತೆಗೆದು ಹಾಕುವಂತೆ ನೋಟಿಸ್ನಲ್ಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಒತ್ತಾಯಿಸಿದೆ.
ನಟಿ ಕಂಗನಾ ವಾರದ ಹಿಂದೆ ಸಿಎಎ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೃದ್ಧೆ ಬಿಲ್ಕಿಸ್ ಬಾನು ಸೇರಿದಂತೆ ಮತ್ತಿಬ್ಬರು ವೃದ್ಧೆಯರ ಫೋಟೊ ಇರುವ ಟ್ವೀಟ್ ಗೆ ಮರು ಟ್ವೀಟ್ ಮಾಡಿದ್ದರು. ಅದರಲ್ಲಿ ಟೈಮ್ ಮ್ಯಾಗಜಿನ್ನಲ್ಲಿ ಕಾಣಿಸಿಕೊಂಡ ಅದೇ ದಾದಿ 100ಕ್ಕೆ ಲಭ್ಯವಿದ್ದಾರೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದರು.
ಈ ಅವಹೇಳನಕಾರಿಯಾಗಿ ಟ್ವೀಟ್ ರೈತರ ಪ್ರತಿಭಟನೆಯನ್ನು ರಾಷ್ಟ್ರ ವಿರೋಧಿ ಆಂದೋಲನದ ರೀತಿ ಬಿಂಬಿಸಲಾಗುತ್ತಿದೆ. ರೈತರ ಪ್ರತಿಭಟನೆ ಬಗ್ಗೆ ಇಷ್ಟು ಅಸೂಕ್ಷ್ಮವಾಗಿ ವರ್ತಿಸುವ ಅವರು, ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಸಮಿತಿಯ ಅಧ್ಯಕ್ಷ ಮಜಿಂದರ್ ಸಿಂಗ್ ಸಿರ್ಸಾ ಟ್ವೀಟ್ನಲ್ಲಿ ಒತ್ತಾಯಿಸಿದ್ದಾರೆ.