ಹುಣಸೂರು, ಡಿ.04 (DaijiworldNews/HR): ರಾಜ್ಯದಲ್ಲಿ ಕಳೆದ ಹತ್ತು ತಿಂಗಳಿನಿಂದ ಬಿಜೆಪಿ ಸರಕಾರವೇ ಸತ್ತು ಕೂತಿದೆ, ಹಾಗಾಗಿ ಸಂಸದ ಪ್ರತಾಪ್ ಸಿಂಹ ಅವರೇ ನಿಮ್ಮ ಸಾಧನೆಗಳೇನು ಎನ್ನುವುದನ್ನು ಜನತೆಯ ಮುಂದಿಡಿ ಎಂದು ಶಾಸಕ ಎಚ್.ಪಿ.ಮಂಜುನಾಥ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ಹಾಗೂ ಜಿಲ್ಲಾಧಿಕಾರಿ ನಡುವಿನ ವಿವಾದವನ್ನು ಮಂತ್ರಿಗಳು ಮಧ್ಯ ಪ್ರವೇಶಿಸಿ ಸುಖ್ಯಾಂತ್ಯಗೊಳಿಸಿದ್ದಾರೆ, ಆದರೆ ಅದಾದ ಬಳಿಕ ಮತ್ತೆ ಮಾಧ್ಯಮದ ಮುಂದೆ ಸಂಸದರು ಪ್ರಸ್ತಾಪಿಸಿ ಜಿಲ್ಲಾಧಿಕಾರಿಗಳು ಜನಸ್ಪಂದನ ನಡೆಸಲು ದೊಣ್ಣೆ ನಾಯಕನ ಅಪ್ಪಣೆ ಬೇಕಾ ಎಂದು ಹೇಳಿದ್ದಾರೆ. ಇದರ ಮರ್ಮವೇನು ಎಂಬುದು ತಿಳಿಯುತ್ತಿಲ್ಲ" ಎಂದರು.
ಇನ್ನು "ಸಂಸದರು ನನ್ನ ಸಾಧನೆ ಬಗ್ಗೆ ಪ್ರಶ್ನಿಸಿ ಟಿವಿ ಮಾಧ್ಯಮ ಕಂಡಕೂಡಲೇ ಬಡಬಡಾಯಿಸುವ ಬದಲು ತಂಬಾಕು ಬೆಳೆಗಾರರ ನೆರವಿಗೆ ನಿಲ್ಲಲಿ ಮತ್ತು ಸಂಸದ ಪ್ರತಾಪ್ ಸಿಂಹ ಅವರೇ ನಿಮ್ಮ ಸಾಧನೆಗಳೇನು ಎನ್ನುವುದನ್ನು ಜನತೆಯ ಮುಂದಿಡಿ" ಎಂದು ಹೇಳಿದ್ದಾರೆ.