ತುಮಕೂರು,ಡಿ.04 (DaijiworldNews/HR): ತಿಗಳ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿ, ಕನಿಷ್ಠ 100 ಕೋಟಿ ಅನುದಾನ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಅಖಿಲ ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘವು ಆಗ್ರಹಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಮುದಾಯದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್, "ತಿಗಳ ಜನಾಂಗದ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಿತದ ಕಾರಣದಿಂದ ಪ್ರವರ್ಗ '2ಎ' ಬದಲಾಗಿ ಪ್ರವರ್ಗ-1ರ ಅಡಿ ಮೀಸಲಾತಿ ಅವಕಾಶ ಕಲ್ಪಿಸಬೇಕು ಮತ್ತು ಕನಿಷ್ಠ 100 ಕೋಟಿ ಅನುದಾನ ನೀಡಬೇಕು" ಎಂದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತಿಗಳ ಸಮುದಾಯದ ಅಭಿವೃದ್ಧಿಗಾಗಿ 80 ಕೋಟಿ ಅನುದಾನ ನೀಡಿದ್ದರು, ಆದರೆ ಅವರ ಬಳಿಕ ಅಧಿಕಾರಕ್ಕೆ ಬಂದ ಸರ್ಕಾರಗಳು ಸಮುದಾಯದ ಪ್ರಗತಿಗಾಗಿ ಯಾವುದೇ ಅನುದಾನ ನೀಡಲಿಲ್ಲ ಎಂದು ದೂರಿದ್ದಾರೆ.