ಬೆಂಗಳೂರು, ಡಿ.04 (DaijiworldNews/PY): "ಯುಗಾದಿ ನಮ್ಮ ಹೊಸ ವರ್ಷ. ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ ನಮ್ಮ ಸಂಸ್ಕೃತಿಯಲ್ಲ. ಕೊರೊನಾದ ಸಂಕಷ್ಟದ ವೇಳೆ ಸಂಭ್ರಮಾಚರಣೆಯ ಅಗತ್ಯ ಇದೆಯೇ?" ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಕೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯಾದ್ಯಂತ ಹೊಸವರ್ಷ ಹಾಗೂ ಕ್ರಿಸ್ಮಸ್ ವೇಳೆ ತೆಗೆದುಕೊಳ್ಳಬೇಕಿರುವ ಕ್ರಮಗಳ ವಿಚಾರವಾಗಿ ಚರ್ಚೆ ಮಾಡಲಾಗುತ್ತಿದೆ. ಸಿಎಂ ಬಿಎಸ್ವೈ ಅವರೊಂದಿಗೆ ಈ ವಿಚಾರದ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನವನ್ನು ತಿಳಿಸಲಾಗುವುದು. ಈ ಸಂದರ್ಭ ಕರ್ಫ್ಯೂ ಜಾರಿ ಅವಶ್ಯ ಎಂದೆನಿಸುತ್ತಿಲ್ಲ. ಈ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.
"ಇದೇ ಮೊದಲ ಬಾರಿಗೆ ಕಡ್ಡಾಯ ಸೇವೆಗಾಗಿ ರಾಜ್ಯದಾದ್ಯಂತ ರೆಸಿಡೆಂಟ್ ವೈದ್ಯರನ್ನು ನಿಯೋಜನೆ ಮಾಡಲಾಗಿದ್ದು, ಅವರಿಗೆ ವೇತನ ಬಿಡುಗಡೆ ಮಾಡಿಲ್ಲ. ವಾರದೊಳಗೆ ಇವರಿಗೆ ವೇತನ ಬಿಡುಗಡೆಯಾಗಲಿದೆ. ತಾಂತ್ರಿಕ ಕಾರಣದ ಹಿನ್ನೆಲೆ ಇವರಿಗೆ ವೇತನ ಬಿಡುಗಡೆ ತಡವಾಗಿದೆ" ಎಂದು ತಿಳಿಸಿದ್ದಾರೆ.
ಕೊರೊನಾ ಲಸಿಕೆ ವಿತರಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಲಸಿಕೆ ವಿತರಣೆ ಸೇರಿದಂತೆ ದಾಸ್ತಾನಿನ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ" ಎಂದಿದ್ದಾರೆ.