ಬೆಂಗಳೂರು, ಡಿ. 03 (DaijiworldNews/SM): ಕೊನೆಗೂ ಶಾಲೆಗಳ ಆರಂಭಗೊಳ್ಳುವ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಕೋವಿಡ್ ತಾಂತ್ರಿಕ ಸಮಿತಿಯು ಜನವರಿಯಿಂದ 10 ಮತ್ತು 12ನೇ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಜನವರಿ ಮತ್ತು ಫೆಬ್ರವರಿಯಲ್ಲಿ ಎರಡನೇ ಕರೋನಾ ವೈರಸ್ ತರಂಗವು ರಾಜ್ಯವನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಸಮಿತಿ ಹೇಳಿದೆ. ಈ ಶಿಫಾರಸು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಸಮಿತಿಯ ಹಿಂದಿನ ವರದಿಯ ಆಧಾರದ ಮೇಲೆ, ನವೆಂಬರ್ 23ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ ಡಿಸೆಂಬರ್ನಲ್ಲಿ ಶಾಲೆಗಳನ್ನು ತೆರೆಯದಿರಲು ನಿರ್ಧರಿಸಿತು. ಡಿಸೆಂಬರ್ ಮೂರನೇ ವಾರದಲ್ಲಿ ಮತ್ತೆ ಸಭೆ ನಡೆಸಲಾಗುವುದು ಮತ್ತು ಸಮಿತಿಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದರು.
ಪ್ರಮುಖ ಶಿಫಾರಸುಗಳು:
ಫೆಬ್ರವರಿ ತನಕ ಪ್ರತಿದಿನ 1.25 ಲಕ್ಷ ಪರೀಕ್ಷೆಗಳನ್ನು ನಡೆಸಲು ಸಮಿತಿ ಶಿಫಾರಸು ಮಾಡಿದೆ. ಉತ್ಸವಗಳು, ಧಾರ್ಮಿಕ, ರಾಜಕೀಯ ಮತ್ತು ಇತರ ಕಾರ್ಯಕ್ರಮಗಳಲ್ಲಿ ದೊಡ್ಡ ಕೂಟಕ್ಕೆ ನಿರ್ಬಂಧ ಹೇರುವುದಂತೆ ಸೂಚಿಸಿದೆ. ಆಂಬುಲೆನ್ಸ್, ಐಸಿಯು ಮತ್ತು ವೆಂಟಿಲೇಟರ್ಗಳನ್ನು ಜನವರಿ ಮೊದಲ ವಾರದಲ್ಲಿ ಸಿದ್ಧವಾಗಿರಿಸಿಕೊಳ್ಳಬೇಕಾಗುತ್ತದೆ. ಡಿಸೆಂಬರ್ 26 ರಿಂದ ಜನವರಿ 1 ರವರೆಗೆ ರಾತ್ರಿ 8 ಗಂಟೆಯ ನಂತರ ಬೆಳಿಗ್ಗೆ 5 ಗಂಟೆಯ ತನಕ ರಾತ್ರಿ ಕರ್ಫ್ಯೂ ಹೇರುವಂತೆ ನಿರ್ದೇಶನ ನೀಡಿದೆ.
ಎಲ್ಲಾ ಸಾಧ್ಯತೆಗಳ ಪ್ರಕಾರ, ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ನಡೆಯುವ ಎಸ್ಎಸ್ಎಲ್ಸಿ ಮತ್ತು ಪಿಯು ಅಂತಿಮ ಪರೀಕ್ಷೆಗಳನ್ನು ಮುಂದಿನ ವರ್ಷ ಜೂನ್ ಅಥವಾ ಜುಲೈಗೆ ಮುಂದೂಡಬಹುದು ಎಂದು ಸಮಿತಿ ತಿಳಿಸಿದೆ.