ಚಂಡೀಗಢ, ಡಿ.03 (DaijiworldNews/MB) : ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಗುರುವಾರ ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸುವ ಮೂಲಕ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ನಾನಿಂದು ರೈತರಿಂದಾಗಿ ಈ ಸ್ಥಾನಕ್ಕೆ ತಲುಪಿದ್ದೇನೆ. ಇಂದವರು ಅವರ ಗೌರವಕ್ಕಿಂತ ಅಧಿಕವಾದದ್ದನ್ನು ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿಯೂ ವಿಭೂಷಣ ಪ್ರಶಸ್ತಿ ನನ್ನಲ್ಲಿಯೇ ಉಳಿಯುವುದು ಸರಿಯಲ್ಲ. ರೈತರು ತಮ್ಮ ಹಕ್ಕಿನ ಉಳಿವಿಗಾಗಿ ಹೋರಾಡುತ್ತಿದ್ದಾರೆ. ಈ ನಡುವೆಯೂ ಹಲವು ಕಹಿ ಅನುಭವಗಳು ಅವರಿಗೆ ಆಗುತ್ತಿದೆ'' ಎಂದರು.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಶಿರೋಮಣಿ ಅಕಾಲಿದಳ, ''ಸರ್ಕಾರವು ಶಾಂತಿಯುತ ಪ್ರತಿಭಟನೆಗೆ ತೋರುತ್ತಿರುವ ನಿರ್ಲಕ್ಷ್ಯತೆ ಹಾಗೂ ರೈತರಿಗೆ ಮಾಡಿದ ದ್ರೋಹದ ವಿರುದ್ದ ಪ್ರಕಾಶ್ ಸಿಂಗ್ ಬಾದಲ್ ಅವರು ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಗುರುವಾರ ಹಿಂದಿರುಗಿಸಿದ್ದಾರೆ'' ಎಂದು ತಿಳಿಸಿದೆ.
ಇನ್ನು ಹಲವು ಕ್ರೀಡಾಪಟುಗಳು ತಮಗೆ ದೊರೆತ ಪ್ರಶಸ್ತಿ ಹಿಂದಿರುಗಿಸುವ ಮುಖೇನ ರೈತರ ಈ ಪ್ರತಿಭಟನೆಯನ್ನು ಬೆಂಬಲಿಸುವ ತೀರ್ಮಾಣ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಕರ್ತಾರ್ ಸಿಂಗ್, ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಸ್ಕೆಟ್ಬಾಲ್ ಆಟಗಾರ ಸಜ್ಜನ್ ಸಿಂಗ್ ಚೀಮಾ, ಅರ್ಜುನ ಪ್ರಶಸ್ತಿ ಪಡೆದ ಹಾಕಿ ಆಟಗಾರ್ತಿ ರಾಜ್ಬೀರ್ ಕೌರ್ ಅವರು ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಅವರು ಶನಿವಾರ ದೆಹಲಿಗೆ ಹೋಗಿ ತಮ್ಮ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದ ಹೊರಗೆ ಇರಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.