ಬೆಂಗಳೂರು, ಡಿ.03 (DaijiworldNews/MB) : ''ಸಾಲ, ಬೆಳೆ ನಾಶ ಮೊದಲಾದ ಕಾರಣಕ್ಕೆ ಆತಂಕಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು'' ಎಂದು ಹೇಳಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ತಮ್ಮ ಹೇಳಿಕೆ ವಿವಾದದ ರೂಪಪಡೆಯುತ್ತಿದ್ದಂತೆ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
''ಆತ್ಮಹತ್ಯೆ ಹೇಡಿತನದ್ದು ಎಂದೆ ರೈತರನ್ನಲ್ಲ. ನಾನು ಎಂದಿಗೂ ರೈತರನ್ನು ಹೇಡಿ ಎಂದು ಕರೆಯಲ್ಲ. ಯಾರೇ ಆಗಲೀ ಆತ್ಮಹತ್ಯೆಯಂತಹ ಹೇಡಿತನದ ಕಾರ್ಯ ಮಾಡಬಾರದು'' ಎಂದು ಹೇಳಿದರು.
''ಕಷ್ಟ ಎಂಬುದು ಇಂದು ಇದ್ದು ನಾಳೆ ಹೋಗುತ್ತದೆ. ಕೋಲಾರ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಕೋಲಾರ ರೈತರು ಮಾದರಿ ಎಂದಿದ್ದೇನೆ. ರೈತರ ಆತ್ಮಹತ್ಯೆ ತಡೆಯಲೆಂದೇ ಕಾರ್ಯಕ್ರಮ ಆಯೋಜಿಸಿದ್ದೇನೆ'' ಎಂದರು.
ಪೊನ್ನಂಪೇಟೆಯ ಸಮೀಪದ ಕೃಷಿ ಕಾಲೇಜಿನಲ್ಲಿ ಗುರುವಾರ 'ಬಿದಿರು ಸಂಸ್ಕರಣೆ ಹಾಗೂ ಬಿದುರು ಮೌಲ್ಯವರ್ಧನಾ ಘಟಕ' ಉದ್ಘಾಟಿಸಿದ ಬಳಿಕ ಮಾತನಾಡಿದ್ದ ಬಿಸಿ ಪಾಟೀಲ್ ''ಕೃಷಿ ಮಾಡಿ ಉತ್ತಮವಾಗಿ ಜೀವನ ನಡೆಸುವವರೂ ಇದ್ದಾರೆ. ಆದರೆ ಹೇಡಿಗಳು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ'' ಎಂದು ಹೇಳಿದ್ದರು.