ತಿಪಟೂರು, ಡಿ.03 (DaijiworldNews/MB) : ''ಗೋವನ್ನು ಯಾರು ಬೇಕಾದರೂ ಕಡಿಯಲಿ ಎಂದು ಹೇಳುವ ಮೂಲಕ ಗೋ ಹತ್ಯೆ ಪರವಾಗಿ ಹೇಳಿಕೆ ನೀಡಿ ಸಿದ್ದರಾಮಯ್ಯ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಎದುರಿಸಲಿ'' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಸವಾಲೆಸೆದಿದ್ದಾರೆ.
ತಿಪಟೂರಿನಲ್ಲಿ ನಡೆದ ಗ್ರಾಮ ಸ್ವರಾಜ್ ಸಮಾವೇಶದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಈಗಾಗಲೇ ಸಚಿವ ಸಂಪುಟದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಚರ್ಚೆಯಾಗಿದ್ದು ಆದಷ್ಟು ಶೀಘ್ರದಲ್ಲೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ'' ಎಂದು ಹೇಳಿದರು.
ಹಾಗೆಯೇ, ''ಸಿದ್ದರಾಮಯ್ಯನವರು ಮುಸ್ಲಿಮರನ್ನು ಓಲೈಸಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ'' ಎಂದು ಆರೋಪಿಸಿದರು.
''ನಾವೀಗ ವಿಧಾನಸಭೆ ಚುನಾವಣೆಗೆ ತೋರುವಷ್ಟೇ ಆಸಕ್ತಿಯನ್ನು ಗ್ರಾಮ ಪಂಚಾಯಿತಿ ಚುನಾವಣೆಗೂ ತೋರಿದ್ದೇವೆ. ಪಂಚಾಯಿತಿ ಚುನಾವಣೆ ಗೆಲುವಿಗಾಗಿ ರಾಜ್ಯದಲ್ಲಿ ಆರು ತಂಡಗಳನ್ನು ರಚಿಸಿದ್ದೇವೆ. ಶೇ 80ರಷ್ಟು ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಪಡೆಯುತ್ತಾರೆ'' ಎಂದು ಭರವಸೆ ವ್ಯಕ್ತಪಡಿಸಿದರು.
''ಇನ್ನು ಸಿ.ಪಿ.ಯೋಗೇಶ್ವರ್ ಸಂಪುಟ ಸೇರ್ಪಡೆ ವಿಚಾರ ಕುರಿತು ಯಾರು ಕೂಡಾ ಹೇಳಿಕೆ ನೀಡದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಆದೇಶವಿದೆ. ನಾವು ಆದೇಶ ಪಾಲಿಸುತ್ತೇವೆ'' ಎಂದು ಈ ಸಂದರ್ಭದಲ್ಲೇ ಹೇಳಿದರು.
ಇತ್ತೀಚೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು, ''ಸಿ.ಪಿ.ಯೋಗೇಶ್ವರ್ ಸಂಪುಟ ಸೇರ್ಪಡೆಯಾಗಲಿದ್ದಾರೆ'' ಎಂದು ಹೇಳಿದ್ದಾರೆ.