ನವದೆಹಲಿ, ಡಿ. 03 (DaijiworldNews/HR): ಬುರೇವಿ ಚಂಡಮಾರುತದಿಂದ ಭೂ ಕುಸಿತ ಉಂಟಾಗುವ ಸಾಧ್ಯತೆಗಳಿದ್ದು, ಕೇರಳ ಮತ್ತು ತಮಿಳುನಾಡಿನ ಜನರಿಗೆ ಬೇಕಾಗುವ ಎಲ್ಲಾ ನೆರವುಗಳನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಬುರೇವಿ ಚಂಡಮಾರುತದ ಬಗ್ಗೆ ತಮಿಳುನಾಡು ಮತ್ತು ಕೇರಳ ಮುಖ್ಯ ಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದು,. ಈ ಎರಡು ರಾಜ್ಯಗಳ ಜನರಿಗೆ ಎಲ್ಲಾ ರೀತಿಯ ನೆರವುಗಳನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಎನ್ಡಿಆರ್ಎಫ್ನ ಹಲವು ತಂಡಗಳನ್ನು ನಿಯೋಜಿಸಲಾಗಿದೆ" ಎಂದು ತಿಳಿಸಿದ್ದಾರೆ.
ಇನ್ನು ಬುರೇವಿ ಚಂಡಮಾರುತವು ಶುಕ್ರವಾರ ದಕ್ಷಿಣ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆಯು ಕೇರಳ ಮತ್ತು ತಮಿಳುನಾಡಿನ ದಕ್ಷಿಣ ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ ಎಂದು ತಿಳಿದು ಬಂದಿದೆ.