ನವದೆಹಲಿ,ಡಿ. 03 (DaijiworldNews/HR): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದಿಯನ್ನು ವಿರೋಧಿಸಿ ರೈತರು ಕಳೆದ 8 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಆ ವೇಳೆ ಅಕಾಲಿಕ ನಿಧನರಾಗಿದ್ದ ರೈತರ ಕುಟುಂಬಕ್ಕೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅಮರೀಂದರ್ ಸಿಂಗ್, " ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಚರ್ಚೆ ನಡೆಯುತ್ತಿದೆ, ಇದಕ್ಕೆ ಪರಿಹಾರ ನೀಡಲು ನಾನು ಏನೂ ಇಲ್ಲ, ಈಗಾಗಲೇ ಗೃಹ ಸಚಿವರೊಂದಿಗಿನ ನನ್ನ ಭೇಟಿಯಲ್ಲಿ ನಾನು ನನ್ನ ವಿರೋಧವನ್ನು ತಿಳಿಸಿದ್ದೇನೆ. ಇದು ನನ್ನ ರಾಜ್ಯದ ಆರ್ಥಿಕತೆ ಮತ್ತು ರಾಷ್ಟ್ರದ ಸುರಕ್ಷತೆಯ ಮೇಲೆ ಪರಿಣಾಮ ಬೀರುವುದರಿಂದ ಸಮಸ್ಯೆಯನ್ನು ಪರಿಹರಿಸುವಂತೆ ವಿನಂತಿಸಿದ್ದೇನೆ" ಎಂದು ಹೇಳಿದ್ದಾರೆ.
ಇನ್ನು ಮೃತ ರೈತರಾದ ಪಂಜಾಬ್ ನ ಮಾನ್ಸಾದ ಬಚೋವಾನಾ ಗ್ರಾಮದ ಗುರ್ಜಂತ್ ಸಿಂಗ್ ದೆಹಲಿಯಲ್ಲಿ ಸಾವನ್ನಪ್ಪಿದ್ದರೆ, ಮೊಗಾ ಜಿಲ್ಲೆಯ ಭಿಂದರ್ ಖುರ್ದ್ ಗ್ರಾಮದ ಗುರ್ಬಚನ್ ಸಿಂಗ್ ಮೊಗಾದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.