ಬರೇಲಿ, ಡಿ. 03 (DaijiworldNews/HR): ನೂತನವಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿರುವ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಮೊದಲ ಪ್ರಕರಣವನ್ನು ದಾಖಲಿಸಿದ ಮೂರು ದಿನಗಳ ಬಳಿಕ ಈ ಪ್ರಕರಣದಲ್ಲಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಮತಾಂತರ ವಿರುದ್ಧದ ಸುಗ್ರೀವಾಜ್ಞೆ ಜಾರಿಗೆ ಬಂದ ಬಳಿಕ ಉವೈಶ್ ಅಹ್ಮದ್(22 ) ನನ್ನು ಬಂಧಿಸಲಾಗಿದೆ.
ಬರೇಲಿ ಜಿಲ್ಲೆಯ ಡಿಯೋರೇನಿಯಾ ಪ್ರದೇಶದಲ್ಲಿ "ಅಪಹರಣಕ್ಕೆ ಬೆದರಿಕೆ ಮತ್ತು 20 ವರ್ಷದ ವಿವಾಹಿತ ಮಹಿಳೆಯನ್ನು ಮತಾಂತರಗೊಳಿಸಿದ್ದಕ್ಕಾಗಿ ಅಹ್ಮದ್ ವಿರುದ್ಧ 2020 ರಲ್ಲಿ ಉತ್ತರಪ್ರದೇಶದ ಕಾನೂನುಬಾಹಿರ ಧರ್ಮ ಪರಿವರ್ತನೆ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆರೋಪಿ ತಲೆಮರೆಸಿಕೊಂಡಿದ್ದ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಸಂಸಾರ್ ಸಿಂಗ್ ಹೇಳಿದ್ದಾರೆ.
ಅವನನ್ನು ಬಂಧಿಸಿ ಬುಧವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅಹ್ಮದ್ ಮತ್ತು ಯುವತಿ ಕಾಲೇಜು ಸ್ನೇಹಿತರಾಗಿದ್ದು, ಬಾಲಕಿಯು ನಾಪತ್ತೆಯಾದಾಗ ಆಕೆಯ ಕುಟುಂಬಸ್ಥರು ಆತನ ವಿರುದ್ಧ ದೂರು ನೀಡಿ ಪ್ರಕರಣ ದಾಖಲಾಗಿತ್ತು.
ಕೆಲವು ತಿಂಗಳುಗಳ ನಂತರ ಯುವತಿಯು ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು, ಆದರೆ ಅಹ್ಮದ್ ಯುವತಿಯನ್ನು ಹಿಂಬಾಲಿಸಲು ಪ್ರಾರಂಭಿಸಿದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಯುವತಿಯ ತಂದೆ ತನ್ನ ದೂರಿನಲ್ಲಿ ಅಹ್ಮದ್ ಕಳೆದ ಮೂರು ವರ್ಷಗಳಿಂದ ಮಗಳನ್ನು ಹಿಂಬಾಲಿಸುತ್ತಿದ್ದಾನೆ ಮತ್ತು ಬೆದರಿಕೆ ಹಾಕುತ್ತಿದ್ದನೆಂದು ಆರೋಪಿಸಿದ್ದಾರೆ.
ಐಸಿಸಿಯ ಸೆಕ್ಷನ್ 504 (ಶಾಂತಿ ಉಲ್ಲಂಘನೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಜೊತೆಗೆ ಅಹ್ಮದ್ ವಿರುದ್ಧ ಸುಗ್ರೀವಾಜ್ಞೆಯ ಸೆಕ್ಷನ್ 3/5 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅಹ್ಮದ್ "ನನ್ನನ್ನು ಲವ್ ಜಿಹಾದ್ ಕಾನೂನಿನಡಿಯಲ್ಲಿ ಬಂಧಿಸಲಾಗಿದೆ. ಆದರೆ ನನಗೆಆ ಯುವತಿಯೊಂದಿಗೆ ಯಾವುದೇ ಸಂಬಂಧವಿಲ್ಲ, ಅವಳು ಒಂದು ವರ್ಷದ ಹಿಂದೆಯೇ ಬೇರೆಯವರನ್ನು ಮದುವೆಯಾಗಿದ್ದಾಳೆ ನಾನು ನಿರಪರಾಧಿ" ಎಂದು ಹೇಳಿದ್ದಾನೆ.