ನವದೆಹಲಿ, ಡಿ.03 (DaijiworldNews/MB) : ಮಥುರಾ ಐತಿಹಾಸಿಕ ಶ್ರೀ ಕೃಷ್ಣ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆಯನ್ನು ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಉತ್ತರ ಪ್ರದೇಶ ಸರ್ಕಾರ ಮೂರು ಸಾವಿರ ಮರಗಳನ್ನು ಕಡಿಯಲು ಮುಂದಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಕೃಷ್ಣನಿಗಾಗಿ ಸಾವಿರಾರು ಮರಗಳ ಮಾರಣಹೋಮ ಮಾಡಲು ಬಿಡಲ್ಲ ಎಂದು ಯೋಗಿ ಸರ್ಕಾರಕ್ಕೆ ಖಡಕ್ ಆಗಿ ಹೇಳಿದೆ.
ಮೂರು ಸಾವಿರ ಮರಗಳನ್ನು ಕಡಿಯಲು ಮುಂದಾದ ಸರ್ಕಾರದ ನಿರ್ಧಾರದ ವಿರುದ್ದ ಆತಂಕ ವ್ಯಕ್ತಪಡಿಸಿದ್ದರು. ಹಾಗೆಯೇ ಈ ಕುರಿತಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿಯು ಕೂಡಾ ಸಲ್ಲಿಕೆಯಾಗಿತ್ತು.
ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್ ಎ ಬಾಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ರನ್ನು ಒಳಗೊಂಡ ಪೀಠ ಕೃಷ್ಟನ ಹೆಸರಲ್ಲಿ ಸಾವಿರಾರು ಮರಗಳನ್ನು ಧರೆಗುರುಳಿಸಲು ನಾವು ಬಿಡಲಾರೆವು ಎಂದು ಹೇಳಿದೆ.
ಇನ್ನು ಸರ್ಕಾರದ ಪರ ವಕೀಲರು, ಸರ್ಕಾರ ಕಡಿಯುವ ಮರಗಳಿಗೆ ಬದಲಾಗಿ ಅದಕ್ಕಿಂತ ಹೆಚ್ಚು ಗಿಡಗಳನ್ನು ನೆಡಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ನೂರು ವರ್ಷದ ಹಳೆಯ ಮರಗಳನ್ನು ಕಡಿಯುವುದು ಹೊಸ ಗಿಡ ನೆಡುವುದಕ್ಕೆ ಸರಿ ಸಮನಲ್ಲ. ಹೊಸ ಗಿಡಗಳು ನೂರಾರು ವರ್ಷಗಳಷ್ಟು ಹಳೆಯ ಮರಗಳಷ್ಟು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದೆ.
ಮಥುರಾ ಜಿಲ್ಲೆಯ ಕೃಷ್ಣ ದೇವಾಲಯಕ್ಕೆ ಸಾಗುವ 25 ಕಿ.ಮೀ. ಉದ್ದ ರಸ್ತೆಯ ಅಗಲೀಕರಣಕ್ಕಾಗಿ ಸರ್ಕಾರವು 2,940 ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿತ್ತು.